ಕೊಪ್ಪಳ: ನಿರಂತರ ಮಳೆಯಿಂದ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಮನುಷ್ಯರ ಪಾಡು ಕೇಳತೀರದ್ದಾಗಿದೆ. ಇನ್ನು ಮೂಕ ಪ್ರಾಣಿಗಳ ಅಳಲು ಕೇಳೋರ್ಯಾರು ಎಂಬಂತಾಗಿದೆ. ಸರಿಯಾದ ಮೇವು ಸಿಗುತ್ತಿಲ್ಲದೇ ರೋಧಿಸುವುದು ಒಂದು ಕಡೆಯಾದ್ರೆ, ಮಳೆಗೆ ಸಿಲುಕಿ ಕೊಟ್ಟಿಗೆಗೆ ಬರಲಾರದೆ ಗೋಳೋ ಎನ್ನುತ್ತಿವೆ.
ಜಿಲ್ಲೆಯೆ ಶಿವಪುರ ಗ್ರಾಮದ ಮಾರ್ಕಂಡೇಶ್ವರ ನಡುಗದ್ದೆಯಲ್ಲಿ ಗೋವುಗಳು ಸಿಲುಕಿವೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಗೋವುಗಳು ನಡುಗದ್ದೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಮೇವು ಸಿಗುತ್ತಿರುವುದು ಅಷ್ಟಕಷ್ಟೇ. ಈಗಾಗಲೇ ಎರಡು ಕರುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಮೇವು ಇಲ್ಲದೆ ಗೋವುಗಳು ನಿತ್ರಾಣಗೊಂಡಿವೆ.
ಹೇಗಾದರೂ ಮಾಡಿ ಇನ್ನುಳಿದ ಗೋವುಗಳನ್ನ ಅಲ್ಲಿಂದ ಕಾಪಾಡಬೇಕಿದೆ. ಇಲ್ಲವಾದಲ್ಲಿ ಆ ಗೋವುಗಳ ಬದುಕು ದುಸ್ತರವಾಗಲಿದೆ. ಸ್ಥಳೀಯರೆಲ್ಲಾ ಜಿಲ್ಲಾಧಿಕಾರಿಗಳಲ್ಲಿ ಗೋವುಗಳ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಮಳೆಯಿಂದಾಗಿ ಸೃಷ್ಟಿಯಾಗಿರುವ ಅವಾಂತರ ಅಷ್ಟಿಷ್ಟಲ್ಲ. ಬೆಳೆ ಹಾನಿಯಾಗಿದೆ. ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮನೆಯಿಂದ ಜನ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಮಳೆ ನಿಂತರೆ ಸಾಕು ಎಂಬ ಸ್ಥಿತಿಯಲ್ಲಿ ಜನರಿದ್ದಾರೆ.