ಚಿತ್ರದುರ್ಗ,(ಅಗಸ್ಟ್.01) : ಚುನಾವಣೆ ಮತದಾರರ ಗುರುತಿನ ಚೀಟಿಗೆ ಜಿಲ್ಲೆಯಲ್ಲಿ ಶೇ.100 ರಷ್ಟು ಆಧಾರ್ ಜೋಡಣೆ ಮಾಡುವ ಕಾರ್ಯ ಕೈಗೊಳ್ಳಲಾಗುವುದು. ಆಧಾರ್ ಜೋಡಣೆ ಮಾಡುವ ಮತದಾರರ ಗೌಪ್ಯತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ವಿಷಯಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯಾಲಯ ಸಚಿವಾಲಯ ಪ್ರಜಾ ಪ್ರತಿನಿಧಿ ಕಾಯ್ದೆ-1950 ಮತ್ತು 51ರ ಕಾಯ್ದೆಗಳಿಗೆ, ಚುನಾವಣಾ ಕಾನೂನುಗಳ ತಿದ್ದುಪಡಿ ಕಾಯ್ದೆ-2021ರ ಅನ್ವಯ ಬದಲಾವಣೆ ತಂದಿದೆ. ಆಗಸ್ಟ್ 1 ರಿಂದ ಈ ತಿದ್ದುಪಡಿ ಅಂಶಗಳು ಜಾರಿಗೆ ಬರಲಿವೆ. ತಿದ್ದುಪಡಿ ಕಾಯ್ದೆಯ ಅನ್ವಯ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು ನಮೂನೆ-6, ಮತದಾರರ ಪಟ್ಟಿಯ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಮಾಹಿತಿ ಪತ್ರ ನಮೂನೆ-6ಬಿ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಅಥವಾ ಹೆಸರು ತೆಗೆದು ಹಾಕಲು ಮತದಾರರ ಅರ್ಜಿ ನಮೂನೆ-7, ಮತದಾರ ಗುರುತಿನ ಚೀಟಿ ಅಥವಾ ಪಟ್ಟಿಯಲ್ಲಿ ತಿದ್ದುಪಡಿ ತರಲು ನಮೂನೆ-8ರ ಪರಿಷ್ಕೃತ ನಮೂನೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ.
*ಮತದಾರರ ಪಟ್ಟಿ ಸೇರ್ಪಡೆಗೆ ವರ್ಷಕ್ಕೆ ನಾಲ್ಕು ಬಾರಿ ಅವಕಾಶ :* ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಬಾರಿ ಅವಕಾಶವನ್ನು ಕಲ್ಪಿಸಲಾಗಿದೆ. ಜನವರಿ 01, ಏಪ್ರಿಲ್ 01, ಜುಲೈ 01, ಹಾಗೂ ಅಕ್ಟೋಬರ್ 01 ತಾರೀಖಿಗೆ 18 ವರ್ಷ ಪೂರೈಸಿದವರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನೋಂದಾಯಿಸಿಕೊಳ್ಳಬಹುದು.
*ಆನ್‌ಲೈನ್ ಮೂಲಕ ಆಧಾರ ಜೋಡಣೆ :* ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂ ಪ್ರೇರಿತವಾಗಿ ತಮ್ಮ ಆಧಾರ್ ಸಂಖ್ಯೆ ಜೋಡಣೆಗೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್.ಓ)ಗಳಿಗೆ ನಮೂನೆ-6ಬಿ ರಲ್ಲಿ ಅರ್ಜಿಸಲ್ಲಿಸಬಹುದು. ಇದರ ಹೊರತಾಗಿ ಓಟರ್ ಹೆಲ್ಪ್ಲೈನ್ ಆ್ಯಪ್, ಅಥವಾ www.nvsp.in ಪರ‍್ಟಲ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ ಇಲ್ಲದಿರುವವರು ಪರ್ಯಾಯ ದಾಖಲೆಗಳಾದ ಎನ್.ಆರ್.ಇ.ಜಿ. ಕಾರ್ಡ, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಇಲಾಖೆಯ ನೀಡಲಾದ ಆರೋಗ್ಯ ಮಿಮೆ ಸ್ಮಾರ್ಟ್ ಕಾರ್ಡ, ಡ್ರೆöÊವಿಂಗ್ ಲೈಸೆನ್ಸ್, ಪಾನ್ ಕಾಡ್, ಪಾಸ್ ಪೋರ್ಟ್, ಪಿಂಚಣಿ ದಾಖಲೆ, ಎನ್.ಪಿ.ಆರ್ ಅಡಿಯಲ್ಲಿ ನೀಡಿರುವ ಆರ್.ಜಿ.ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ದಿಮೆಗಳು ನೀಡಿದ ಭಾವಚಿತ್ರ ಇರುವ ಗುರುತಿನ ಚೀಟಿ, ಸಂಸತ್, ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ ಸಲ್ಲಿಸಬಹುದು.
*ಬಿತ್ತ ಪತ್ರ ಬಿಡುಗಡೆ, ಜಾಗೃತಿ ಜಾಥಗೆ ಚಾಲನೆ :* ಮತದಾರರ ನೋಂದಣಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಜಾಥಗೆ ಚಾಲನೆ ನೀಡಿದರು. ಆಧಾರ್ ಜೋಡಣೆ ಕುರಿತು ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು. ಜಾಗೃತಿ ಜಾಥಗಳಿಗೆ ಜಿ.ಪಂ.ಸಿಇಓ ನೇತೃತ್ವದ ಸ್ಪೀಪ್ ಸಮಿತಿಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾದ ಜಾಥ, ಚಿತ್ರದುರ್ಗ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಚುನಾವಣಾ ತಹಶೀಲ್ದಾರ್ ಕೃಷ್ಣ ಪ್ರಸಾದ್, ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.