ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಆಡಳೊತ ನಡೆಸುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಲಿಂಗಾಯತರ ವಿಚಾರವಾಗಿ ಚರ್ಚೆ ಹುಟ್ಟು ಹಾಕಿದ್ದಾರೆ. ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕಾಂಗ್ರೆಸ್ ಪಕ್ಷದಲ್ಲಿ ಸಿಗುತ್ತಿಲ್ಲ. ಲಿಂಗಾಯತರೆಲ್ಲಾ ಒಂದಾದರೆ ಸರ್ಕಾರವನ್ನೇ ಅಲ್ಲಾಡಿಸಬಹುದು ಎಂದಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಕೊಂಚ ಗೊಂದಲವನ್ನುಂಟು ಮಾಡಿದೆ.
ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನಪರ ಕೆಲಸ ಮಾಡುತ್ತಿದೆ. ಕಾವೇರಿ ಹೋರಾಟದ ನಡುವೆ ಈ ವಿಚಾರ ತಂದು ಡೈವರ್ಟ್ ಮಾಡುವುದು ಬೇಡ. ಮಾನ್ಯ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮುದಾಯದ ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು. ಅವರ ಭಾವನೆಗಳನ್ನು ನಾವೂ ಗೌರವಿಸುತ್ತೇವೆ.
ನಮ್ಮ ಸಮುದಾಯದಕ್ಕೆ ಆ ರೀತಿ ಏನಾದರೂ ಆಗಿದ್ದರೆ ನಾವೂ ಕೂತು ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಏಳು ಜನ ಲಿಂಗಾಯತರೆ ಮಂತ್ರಿಗಳಾಗಿದ್ದೀವಿ. ಎಲ್ಲರೂ ಸಮರ್ಥರಿದ್ದೇವೆ. ಹಿರಿಯರು ಹೇಳಿರುವುದನ್ನು ಖಂಡಿತ ವಿಚಾರ ಮಾಡುತ್ತೇವೆ. ಸಂಬಂಧಪಟ್ಟವರ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅವರು ಪಕ್ಷದ ವಿಚಾರವಾಗಿ ಮಾತನಾಡಿಲ್ಲ. ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿಯೂ ಈ ಹಿಂದೆ ಈ ಬಗ್ಗೆ ಮಾತನಾಡಿದ್ದರು ಎಂದಿದ್ದಾರೆ.