ಸುದ್ದಿಒನ್ : ಲೋಕಸಭೆ ಚುನಾವಣೆಯ ಅಂತಿಮ ಹಂತದ ಪ್ರಚಾರ ಮತ್ತಷ್ಟು ಬಿರುಸುಗೊಂಡಿದೆ. ಇಂದು ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಬಿರುಸಿನ ಪ್ರಚಾರ ನಡೆಸಿದರು. ಸಂವಿಧಾನವನ್ನು ಬದಲಿಸಿ ಧರ್ಮದ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸಲು ಇಂಡಿಯಾ ಒಕ್ಕೂಟ ಸಂಚು ರೂಪಿಸಿದೆ ಎಂದರು.
ನರೇಂದ್ರ ಮೋದಿಯವರು ಮೂರನೇ ಬಾರಿಗೆ ಧರ್ಮದ ಮೇಲೆ ರಾಜಕಾರಣ ಮಾಡುವ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.
ಜೂನ್ 1 ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ನಾಯಕರು ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ಮೋದಿಯವರು ಟೀಕಿಸಿದ್ದಾರೆ. ಮೋದಿ ಇಂಡಿಯಾ ಮೈತ್ರಿಯನ್ನು ನಷ್ಟದ ಷೇರುಗಳೊಂದಿಗೆ ಹೋಲಿಸಿದರು. ನಷ್ಟದಲ್ಲಿರುವ ಕಂಪನಿಯ ಷೇರುಗಳನ್ನು ಯಾರೂ ಖರೀದಿಸುವುದಿಲ್ಲ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕುವುದು ವ್ಯರ್ಥ ಎಂದು ಟೀಕಿಸಿದರು. ಮೋದಿ ಅವರು ಚಹಾದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು. ಬಾಲ್ಯದಲ್ಲಿ ರೈಲಿನಲ್ಲಿ ತಟ್ಟೆ ತೊಳೆದು ಚಹಾ ಮಾರುತ್ತಿದ್ದೆ ಎಂದರು.
ಈಗಲೂ ಕೂಡಾ ನನಗೆ ಚಹಾ ಎಂದರೆ ಇಷ್ಟ ಎಂದು ಹೇಳಿದರು. ಕಮಲ ಮುಂಜಾನೆ ಅರಳುತ್ತದೆ ಮತ್ತು ಅದೇ ಸಮಯದಲ್ಲಿ ಎಲ್ಲರೂ ಚಹಾ ಕುಡಿಯುತ್ತಾರೆ, ಹೀಗಾಗಿ ಬಿಜೆಪಿಗೂ ಚಹಾಗೂ ಉತ್ತಮ ಸಂಬಂಧವಿದೆ ಎಂದು ಮೋದಿ ಹೇಳಿದರು.
ಯುಪಿಯಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಫಿಯಾ ರಾಜ್ ಇತ್ತು. ಯೋಗಿ ಸಿಎಂ ಆದ ಬಳಿಕ ಮಾಫಿಯಾವನ್ನು ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದೆ ಎಂದರು.
ಮಿರ್ಜಾಪುರ ಸಭೆಯಲ್ಲಿಂದು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಬೆಂಬಲಿಸಿ ಮೋದಿ ಪ್ರಚಾರ ನಡೆಸಿದರು. ಧರ್ಮದ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸಲು ಸಂವಿಧಾನವನ್ನು ಬದಲಾಯಿಸಲು ಇಂಡಿಯಾ ಮೈತ್ರಿಕೂಟ ಸಂಚು ಮಾಡುತ್ತಿದೆ ಎಂದು ಮೋದಿ ಹೇಳಿದರು.
ಆದರೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿಯವರ ಟೀಕೆಗೆ ಕೌಂಟರ್ ನೀಡಿದ್ದಾರೆ. ಪಂಜಾಬ್‌ನ ಚಂಡೀಗಢ ಮತ್ತು ಪಟಿಯಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಿಯಾಂಕಾ ಪ್ರಚಾರ ನಡೆಸಿ, ಪ್ರಧಾನಿ ಮೋದಿಯವರು ಧರ್ಮ ರಾಜಕಾರಣ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದು, ಈಗ ಅದೇ ದಾರಿಯನ್ನು ಆರಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದನ್ನೇ ಮರೆತಿದ್ದಾರೆ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.