ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 08 : ಕಲಬುರಗಿ ಜಿಲ್ಲೆಯ ವಕೀಲ ಈರನಗೌಡ ಪಾಟೀಲರನ್ನು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲು ಬರುವ ಸಮಯದಲ್ಲಿ ಹಾಡ ಹಗಲೇ ವಕೀಲರ ಸಮವಸ್ತ್ರದಲ್ಲಿರುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯನ್ನು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ಬಲವಾಗಿ ಖಂಡಿಸಿದೆ. ಅಲ್ಲದೆ ಚಿತ್ರದುರ್ಗ ನ್ಯಾಯಾಲಯದಿಂದ ಆರಂಭಿಸಿ ಪ್ರಮುಖ ಬೀದಿ ಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಸರ್ವ ಸದಸ್ಯರ ತುರ್ತು ಸಭೆ ನಡೆಸಿದ ವಕೀಲರ ಸಂಘ ರಾಜ್ಯಾದ್ಯಂತ ವಕೀಲರ ಮೆಲೆ ಹಲ್ಲೆ, ದೌರ್ಜನ್ಯ, ಕೊಲೆ, ಕಿರುಕುಳ ತೊಂದರೆ ನೀಡುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ವಕೀಲರ ಹಾಗು ವಕೀಲರ ಕುಟುಂಬದ ಸದಸ್ಯರಿಗೆ ರಕ್ಷಣೆ ಇಲ್ಲವಾಗಿದೆ. ಆರನೇ ಗ್ಯಾರಂಟಿ ಯಾಗಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ವಕೀಲರೇ ಆದ ಸಿದ್ದರಾಮಯ್ಯ ಅವರು ನುಡಿದಂತೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ರಾಜ್ಯದ ಅನೇಕ ರಾಜಕಾರಣಿಗಳ ಪ್ರಕರಣಗಳನ್ನು ಯಾವುದೇ ವಕೀಲರು ನಡೆಸದಂತೆ ತೀರ್ಮಾನ ಮಾಡಿಕೊಳ್ಳಬೇಕು ಎಂದು ರಾಜ್ಯ ಪರಿಷತ್ ಗೆ ತಿಳಿಸಲು ಚರ್ಚೆ ಮಾಡಿದರು. ವಕೀಲರ ರಕ್ಷಣಾ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಮಾಡಬೇಕು. ವಕೀಲರ ತಾಳ್ಮೆಗೆ ಒಂದು ಮಿತಿ ಇದೇ ದಯವಿಟ್ಟು ನಮ್ಮನ್ನಾಳುವ ಸರ್ಕಾರಗಳು ವಕೀಲರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕದೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಸಭೆಯಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್ ಗಂಗಾಧರ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ವಕೀಲರ ಮೇಲೆ ನಡೆಯುತ್ತಿರುವ ಮತ್ತು ನಡೆಸುತ್ತಿರುವ ಹಲ್ಲೆ, ದೌರ್ಜನ್ಯ, ಕೊಲೆ ಹಿಂಸೆಗಳು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಸಾಕಾಗುತ್ತಿಲ್ಲವೆ ಇನ್ನೆಷ್ಟು ಕೊಲೆ, ಹತ್ಯೆ, ದೌರ್ಜನ್ಯಗಳು, ಹಿಂಸೆಗಳು ನಡೆಯಬೇಕು ಇದಕ್ಕೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ಇಂತಹ ಘಟನೆಗಳಿಗೆ ಕೊನೆ ಹಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ತಾನು ವಕೀಲ ಸಮುದಾಯಕ್ಕೆ ಮಾತು ಕೊಟ್ಟ ಪ್ರಕಾರ ತತ್ ಕ್ಷಣ ಕರ್ನಾಟಕ ರಾಜ್ಯ ವಕೀಲರ ರಕ್ಷಣಾ ಕಾಯ್ದೆಯನ್ನು ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚಿಸಿ ಅದನ್ನು ಜಾರಿ ಮಾಡಬೇಕು ಎಂದು ಹೇಳಿದರು.
ವಕೀಲರ ರಕ್ಷಣಾ ಕಾಯ್ದೆಗೆ ಒತ್ತಾಯಿಸಿ ಈಗಾಗಲೇ ಇಡೀ ರಾಜ್ಯದಲ್ಲಿ ವಕೀಲರು ಹಲವಾರು ವರ್ಷಗಳಿಂದ ನಿರಂತರವಾಗಿ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದ್ದು, ರಾಜ್ಯ ಸರ್ಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲು ವಿಫಲವಾದಲ್ಲಿ ಮತ್ತೆ ರಾಜ್ಯದ ಎಲ್ಲಾ ವಕೀಲರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಮತ್ತು ಧರಣಿ ಹೋರಾಟ ಮಾಡುವ ಎಚ್ಚರಿಕೆಯನ್ನು ಕೂಡ ನೀಡಿದರು.
ಸಭೆಯಲ್ಲಿ ವಕೀಲರಾದ ಕೆ.ಎಂ.ಮಲ್ಲಿಕಾರ್ಜುನ್, ಕೆ. ಮಂಜುನಾಥ್ ರೆಡ್ಡಿ, ಡಾ.ಎಂ.ಸಿ.ನರಹರಿ, ವಿಜಯ್ ಕುಮಾರ್, ಎಂ.ಕೆ.ಲೋಕೇಶ್, ದಿಲ್ ಷಾದ್ , ಸೋಮಶೇಖರ್ ರೆಡ್ಡಿ. ಮಾಲತೇಶ್ ಅರಸ್, ಜಯಣ್ಣ, ರವೀಂದ್ರ ರಾಥೋಡ್, ಪ್ರತಾಪ್ ಜೋಗಿ ಇನ್ನೂ ಅನೇಕರು ಮಾತನಾಡಿದರು.
ಆದ್ದರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ವೇದಿಕೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವೈ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್, ಖಜಾಂಚಿ ಪ್ರದೀಪ್, ಕಾರ್ಯಕಾರಿ ಸದಸ್ಯೆ ರೂಪಾದೇವಿ, ಶೀಲಾ ವೇದಿಕೆಯಲ್ಲಿ ಇದ್ದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವೈ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಮತ್ತು ಪದಾಧಿಕಾರಿಗಳು ವಹಿಸಿದ್ದರು.
ಇನ್ನೂ ಬೃಹತ್ ಪ್ರತಿಭಟನೆಯು ನ್ಯಾಯಾಲಯದಿಂದ ಹೊರಟು ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತ, ಮಹಾವೀರ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಸಂಚರಿಸಿ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಲಾಯಿತು.
ನ್ಯಾಯಾಲಯದ ಮುಂಭಾಗ ಶಾಮಿಯಾನ ಹಾಕಿ ಪ್ರತಿಭಟನೆ ಮಾಡಿದರು. ಈ ವೇಳೆ ಹಿರಿಯ ವಕೀಲರಾದ ಮಂಜುನಾಥ್, ತಿಪ್ಪೇಸ್ವಾಮಿ, ಉಮೇಶ್, ಮಲ್ಲಿಕಾರ್ಜುನ, ಅಬ್ದುಲ್ ಜಿಲ್ಫಿಕರ್, ವೀರೇಶ್, ಗೀತಾ, ರಾಧ, ಮಂಜುಳ, ದೇವಕಿ, ತಕ್ಷಶಿಲ, ಅಕ್ಷಿತಾ, ಮೆಹರೋಜ್ ಬೇಗಂ,ಚಿನ್ನಪ್ಪ, ಗೋವಿಂದ ರೆಡ್ಡಿ, ಉಮಾಪತಿ, ಶಿವಣ್ಣ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.