ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 25 : ಮಳೆಯ ಅಭಾವದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಒಣಗುತ್ತಿರುವುದರಿಂದ ರಾಜ್ಯಾದ್ಯಂತ ಬರಗಾಲವೆಂದು ಘೋಷಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಳೆ-ಬೆಳೆಯಿಲ್ಲದೆ ಸಂಕಷ್ಟಕ್ಕೆ ತುತ್ತಾಗಿರುವ ರೈತರಿಗೆ ಎಕರೆಗೆ ಇಪ್ಪತ್ತೈದು ಸಾವಿರ ರೂ.ಗಳ ಪರಿಹಾರ ಘೋಷಿಸಿ ಜನ-ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಧರಣಿನಿರತ ರೈತರು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಚಿತ್ರದುರ್ಗ ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಭದ್ರಾಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿ ರೈತರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ನೂರು ವರ್ಷಗಳಲ್ಲಿ 60 ವರ್ಷಗಳ ಕಾಲ ಜಿಲ್ಲೆ ಬರಗಾಲವನ್ನು ಕಂಡಿದೆ. 1974 ರಲ್ಲಿ ಕಂಡಂತ ಬರಗಾಲ 49 ವರ್ಷದ ನಂತರ ಮತ್ತೆ ಮರುಕಳಿಸಿದೆ. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಕಾಳಜಿಯಿಂದ ಭರಮಸಾಗರ ಸುತ್ತಮುತ್ತಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ಮಠಾಧೀಶರುಗಳು ನಿರ್ಧಾರ ತೆಗೆದುಕೊಂಡು ಕೆರೆಗಳಿಗೆ ನೀರು ತುಂಬಿಸಿದಾಗ ಮಾತ್ರ ಬರಗಾಲದಿಂದ ರೈತರು ಬಚಾವಾಗಬಹುದು. ಕೆರೆ ಇಲ್ಲದ ಹಳ್ಳಿಗಳಿಗೆ ಹಾಗೂ ಕೆರೆಯ ಮೇಲ್ಭಾಗದಲ್ಲಿರುವ ಗ್ರಾಮಗಳಿಗೆ ಭದ್ರಾಮೇಲ್ದಂಡೆ ಯೋಜನೆಯಿಂದ ನೀರು ಹರಿಯಬೇಕು.
ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರಾ ಯೋಜನೆಯಿಂದ ನೀರು ಸಂಗ್ರಹಿಸಿಕೊಂಡರೆ ಎಲ್ಲಾ ಕೆರೆಗಳಿಗೆ ನೀರು ಹರಿಸಲು ನೆರವಾಗುತ್ತದೆ. ಇಡೀ ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿಸಬೇಕಾದರೆ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ಗುಣಮಟ್ಟದ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಅಕ್ರಮ ಸಕ್ರಮದಡಿಯಲ್ಲಿ ಹಣ ಪಾವತಿಸಿರುವ ರೈತರ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತರ ಎಲ್ಲಾ ಸಾಲ ವಸೂಲಾತಿಯನ್ನು ನಿಲ್ಲಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೆ.ಇ.ಆರ್.ಸಿ. ಪಂಪ್ಸೆಟ್ಗಳ ಆರ್.ಆರ್.ನಂಬರ್ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಹಿಂದಕ್ಕೆ ಪಡೆಯಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಅರಣ್ಯ ಕಾಯಿದೆಗೆ ತಿದ್ದುಪಡಿ ತಂದು ರೈತರಿಗೆ ಸಾಗುವಳಿ ಪತ್ರ ಕೊಡಬೇಕು. ಕೆಂಪುತಲೆ ಹುಳುವಿನ ಭಾದೆಗೆ ಒಳಗಾಗಿರುವ ತೆಂಗಿನ ತೋಟಗಳಿಗೆ ಅಗತ್ಯ ಚಿಕಿತ್ಸೆಯನ್ನು ತುರ್ತಾಗಿ ಒದಗಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಧರಣಿನಿರತರು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ಅಖಂಡ ಕರ್ನಾಟಕ ರೈತ ಸಂಘದ ಸಿದ್ದಪ್ಪ, ರೈತ ಮುಖಂಡರುಗಳಾದ ಸಂಜೀವಪ್ಪ, ಆರ್.ಬಿ.ಲೋಕಣ್ಣ, ಎಸ್.ಮಹದೇವಪ್ಪ, ನಾಗಪ್ಪ, ಪಿ.ಆರ್.ಮಾರುತಿ, ಸಿ.ಆರ್.ಜಯಪ್ಪ, ದಿವ್ಯಜ್ಯೋತಿ, ಹೆಚ್.ಬಸವರಾಜಪ್ಪ, ಜಿ.ಕೆ.ನಾಗರಾಜ್, ಸದಾಶಿವಪ್ಪ, ಕೆ.ಸಿ.ಪರಮೇಶ್ವರಪ್ಪ, ನಿಜಲಿಂಗಪ್ಪ, ರಾಜಶೇಖರಪ್ಪ, ಶೇಷಣ್ಣರೆಡ್ಡಿ, ರೇವಣಸಿದ್ದಪ್ಪ, ನರಸಿಂಹಪ್ಪ, ವೇದಮೂರ್ತಿ, ರವಿ, ಕರಿಯಪ್ಪ, ಶಂಕರಮೂರ್ತಿ, ಹರೀಶ್, ಗಿರೀಶ್ ಸೇರಿದಂತೆ ನೂರಾರು ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದರು.