ಕಲಬುರಗಿ: ದಲಿತರ ಕಾಲೋನಿಯ ಮನೆಗಳ ಬಾಗಿಲ ಮುಂದೆಯೇ ತಂತಿ ಬೇಲಿ ಹಾಕಿರುವ ಘಟನೆ ಅಫಜಲ್ಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ನಡೆದಿದೆ. ವಿಠ್ಠಲ್ ಸಗರ ಎಂಬುವವರು ಈ ರೀತಿ ತಂತಿ ಬೇಲಿ ಹಾಕಿದ್ದಾರೆ.
ದಲಿತರು ಕಳೆದ 40 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಒಂದು ದಿನವು ಇಲ್ಲದ ಸಮಸ್ಯೆ ಏಕಾಏಕಿ ಎದುರಾಗಿದೆ. ಇದು ಸರಿಯಲ್ಲ ಎಂದು ಕೇಳಲು ಹೋದವರ ಮೇಲೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಈ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ದಲಿತ ಸಂಘಟನೆಗಳು ಎಚ್ಚರಿಸಿದ್ದಾರೆ.
ವಿಠಲ್ ಸಾಗರ್ ಎಂಬುವವರು ದಲಿತ ಕಾಲೋನಿಯ ಪಕ್ಕದಲ್ಲಿರುವ ಜಮೀನೊಂದನ್ನು ಖರೀದಿ ಮಾಡಿದ್ದರು. ಜಮೀನಿನ ಹದ್ದುಬಸ್ತು ಅಳತೆ ಮಾಡಿಸಿ ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ತಮ್ಮ ಜಮೀನಿನ ಹದ್ದುಬಸ್ತಿನಲ್ಲಿ ಬರುವ ಜಾಗದಲ್ಲಿ ತಂತಿ ಬೇಲಿ ಹಾಕಿದ್ದಾರೆ. ಆದರೆ ತಂತಿ ಬೇಲಿ ದಲಿತರ ಕಾಲೋನಿಯ ಮನೆಗಳ ಬಾಗಿಲಿನ ಮುಂದೆಯೇ ಬಿದ್ದಿದ್ದು, ಈಗ ದಲಿತ ಕಾಲೋನಿ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ಮನೆಯಿಂದ ಹೊರಗಡೆ ಹೋಗುವುದಕ್ಕೆ ಜಾಗವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ಸಂಬಂಧ ಸಮಸ್ಯೆ ನಿವಾರಿಸಲು ಸ್ಥಳಕ್ಕೆ ತಹಸೀಲ್ದಾರ ಸಂಜೀವಕುಮಾರ ದಾಸರ್, ಸಿಪಿಐ ಜಗದೇವಪ್ಪ ಪಾಳಾ, ರೇವೂರ(ಬಿ)ಠಾಣೆ ಪಿಎಸ್‌ಐ ಗಂಗಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.