ಚಿಕ್ಕಮಗಳೂರು: ಮೈಲಾರಲಿಂಗೇಶ್ವರನ ಕಾರ್ಣಿಕ ಎಂದರೆ ಎಲ್ಲರೂ ತದೇಕಚಿತ್ತದಿಂದ ನೋಡುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಮಹಾನವಮಿ ಬಯಲಿನಲ್ಲಿ ಕಾರ್ಣಿಕ ನಡೆದಿದೆ. ಭಾನುವಾರ ನಸುಕಿನ ಜಾವ 4.45ರ ವೇಳೆಗೆ ಭವಿಷ್ಯ ನುಡಿಯಲಾಗಿದೆ. ಈ ವೇಳೆ ರಾಜ್ಯದ ಬಗ್ಗೆ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ಇಟ್ಟ ರಾಮನ ಬಾಣ ಹುಸಿಯಿಲ್ಲ.. ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿ ಸಂಪಾಯಿತಲೇ ಪರಾಕ್ ಎಂಬ ನಾಣ್ನುಡಿ ನುಡಿದಿದ್ದಾರೆ. ಅಂದ್ರೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಇದರಿಂದ ಸಕಲ ಜೀವರಾಶಿಗಳು ಸಂಪಾಗಿರುತ್ತವೆ ಎಂದಿದ್ದಾರೆ. ಹಾಗೇ ನ್ಯಾಯದ ತಕ್ಕಡಿ ಜರುಗಿತು ಎಂದರೆ, ಈಗಾಗಲೇ ಹಲವು ಗಣ್ಯ ವ್ಯಕ್ತಿಗಳ ವಿರುದ್ಧ ಕೇಸು ದಾಖಲಾಗಿವೆ, ಕೆಲವರು ಜೈಲುಪಾಲಾಗಿದ್ದಾರೆ. ನ್ಯಾಯಕ್ಕೆ ಜಯ ಸಿಗದೆ ಅನ್ಯಾಯದ ಮಾರ್ಗದಲ್ಲಿರುವವರಿಗೆ ನ್ಯಾಯ ಸಿಗಲಿದೆ ಎಂದೇ ಹೇಳುತ್ತಿದ್ದಾರೆ.
ಕಾರ್ಣಿಕ ಕೇಳಲು ಸಾಕಷ್ಟು ಜನ ನೆರೆದಿದ್ದರು. ರಾಜ್ಯದಲ್ಲಿ ಮಳೆ ಬೆಳೆಯ ಬಗ್ಗೆ ಕೇಳಿದ ಜನ ಸಂತೃಪ್ತರಾದರು. ಯಾಕಂದ್ರೆ ಕಳೆದ ವರ್ಷ ರಾಜ್ಯದಲ್ಲಿ ಬರಗಾಲ ಆವರಿಸಿತ್ತು. ರೈತರು ನಷ್ಟ ಅನುಭವಿಸಿದರು. ಜಾನುವಾರುಗಳಿಗೂ ಸಾಕಷ್ಟು ತೊಂದರೆ ಆಯ್ತು. ಬೆಳೆ ಕೈಗೆ ಸಿಗದೆ ರೈತರು ಕಂಗಾಲಾಗಿದ್ದರು. ಈ ವರ್ಷ ಅದರ ಟೆನ್ಶನ್ ಇಲ್ಲ. ಆರಂಭದಿಂದಾನೂ ಮಳೆ ಉತ್ತಮವಾಗಿದೆ. ಒಣಗಿ ನಿಂತ ಕೆರೆ ಕಟ್ಟಗಳು ಈಗ ತುಂಬಿ ತುಳುಕುತ್ತಿವೆ. ಜಾನುವಾರುವಳಿಗೂ ಹಸಿರು ಮೇವು ಸಿಗುತ್ತಿದೆ. ಈಗ ಕಾರ್ಣಿಕದಲ್ಲೂ ಅದೇ ರೀತಿಯ ಭವಿಷ್ಯ ಕೇಳಿ ಬಂದಿರುವುದು ರಾಜ್ಯದ ಜನತೆ ಖುಷಿ ಪಡುವಂತೆ ಮಾಡಿದೆ.