ದಾವಣಗೆರೆ: ಕಲ್ಲಿನ ನಾಗರಕ್ಕೆ, ಹುತ್ತಗಳಿಗೆ ಹಾಲನ್ನು ಎರೆದು ವ್ಯರ್ಥ ಮಾಡುವುದಕ್ಕಿಂತ ಬಡ ಮಕ್ಕಳಿಗೆ ನೀಡಿ ಎಂಬ ಮಾತನ್ನು ಹಿರಿಯರು, ಸ್ವಾಮೀಜಿಗಳು ಹೇಳುತ್ತಲೇ ಇರುತ್ತಾರೆ. ಆದರೆ ಸಾಕಷ್ಟು ಜನ, ಹುತ್ತಕ್ಕೆ ಹಾಕಿದರೇನೆ ಫಲ ಎಂಬಂತೆ ಭಾವಿಸುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾಗರಪಂಚಮಿ ಹಬ್ಬ ಬರುತ್ತಿದೆ. ಈ ಹಬ್ಬ ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾನೇ ಸ್ಪೆಷಲ್. ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಾಗೇ ಹುತ್ತಗಳಿಗೆ, ಕಲ್ಲು ನಾಗರಕ್ಕೆ ಹಾಲೆರೆಯುವ ಪದ್ಧತಿ ಇದೆ.
ಇದನ್ನು ತಪ್ಪಿಸಲು, ಹಾಲು ವ್ಯರ್ಥವಾಗದಂತೆ ತಡೆಯಲು, ಬಡಮಕ್ಕಳಿಗೆ ಆ ಹಾಲು ದೊರಕುವಂತೆ ಮಾಡಲು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಒಂದು ಹೊಸ ಅಭಿಯಾನವನ್ನು ಶುರು ಮಾಡಿದ್ದಾರೆ. ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಸಂಚರಿಸಿ, ಕಲ್ಲು ನಾಗರಕ್ಕೆ ಹಾಕುವ ಹಾಲು ಬಡ ಮಕ್ಕಳ ಪಾಲು ಎಂದು ವಿಶೇಷ ಆಂದೋಲನ ಆರಂಭಿಸಿದ್ದಾರೆ. ಜನರಿಗೆ ಜಾಗೃತಿ ಮೂಡಿಸಿದ್ದಾರೆ.
ಜಯಮೃತ್ಯುಂಜಯ ಈ ಮೊದಲು ದಾವಣಗೆರೆಯ ವಿರಕ್ತಮಠದ ಸ್ವಾಮೀಜಿಯಾಗಿದ್ದರು. ಇಂದು ದಾವಣಗೆರೆಗೆ ಭೇಟಿ ನೀಡಿ, ಈ ವಿಚಾರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಕೆಲ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಹಾಲು ಹಾಗೂ ಬ್ರೆಡ್ ನೀಡಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಅಭಿಯಾನವನ್ನು ಸುಮಾರು 26 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಸ್ವಾಮೀಜಿ ಸುಮಾರು 120ಕ್ಕೂ ಹೆಚ್ಚು ಕಡೆ ಈ ರೀತಿಯ ಅಭಿಯಾನವನ್ನು ನಡೆಸುತ್ತಾರೆ. ನಾಗರಪಂಚಮಿ ಹಬ್ಬದಂದು ಮೂಢನಂಬಿಕೆಯಿಂದ ಕಲ್ಲು ನಾಗರಕ್ಕೆ ಹಾಲು ಹಾಕುವುದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾ ಬಂದಿದ್ದಾರೆ.