ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಆ. 06) : ನಗರದ ಕವಾಡಿಗರ ಹಟ್ಟಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಭಾನುವಾರದಂದು ಭೇಟಿ ನೀಡಿ ಈ ಪ್ರದೇಶದಲ್ಲಿನ ಸ್ವಚ್ಛತೆ, ಜನರ ಆರೋಗ್ಯ ಸ್ಥಿತಿಗತಿ ಹಾಗೂ ಕೈಗೊಂಡಿರುವ ನೈರ್ಮಲ್ಯ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕಲುಷಿತ ನೀರು ಸೇವನೆಯಿಂದ ಕವಾಡಿಗರ ಹಟ್ಟಿಯಲ್ಲಿ ಸಾರ್ವಜನಿಕರು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಕಳೆದ ನಾಲ್ಕೈದು ದಿನಗಳಿಂದಲೂ ಈ ಪ್ರದೇಶದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಆರೋಗ್ಯ ಇಲಾಖೆಯಿಂದ, ಇಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆಯೂ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ಅಲ್ಲದೆ ಇಲ್ಲಿನ ನೀರಿನ ಸಂಗ್ರಹಗಾರವನ್ನು ಸ್ವಚ್ಛಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರವನ್ನು ತೆರೆದು, ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಲಾಗುತ್ತಿದೆ.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಭಾನುವಾರದಂದು ಕವಾಡಿಗರ ಹಟ್ಟಿಗೆ ತೆರಳಿ, ಮನೆ ಮನೆ ಭೇಟಿ ಕಾರ್ಯ ಕೈಗೊಂಡು, ಸಾರ್ವಜನಿಕರಿಂದ ಆರೋಗ್ಯದ ಬಗ್ಗೆ ವಿಚಾರಿಸಿದರು, ಅಲ್ಲದೆ ಇಲ್ಲಿ ಕೈಗೊಳ್ಳಲಾಗುತ್ತಿರುವ ಸ್ವಚ್ಛತಾ ಕಾರ್ಯಗಳು ಹಾಗೂ ಸಾರ್ವಜನಿಕರ ಚಿಕಿತ್ಸಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ, ಸಿಬ್ಬಂದಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಾಶಿ, ಸೇರಿದಂತೆ ವಿವಿಧ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.