ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.21 : ಪ್ರಸಕ್ತ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಆರನೇ ಗ್ಯಾರೆಂಟಿಯಾಗಿ ಗೌರವ ಧನ ಹೆಚ್ಚಿಸುವಂತೆ ಎ.ಐ.ಟಿ.ಯು.ಸಿ. ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಎ.ಐ.ಟಿ.ಯು.ಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಜನಪರವಾಗಿದ್ದರೂ ವಿವಿಧ ಯೋಜನೆಗಳಲ್ಲಿ ಸ್ಕೀಂ ವರ್ಕರ್ಸ್‍ಗಳಾಗಿ ದುಡಿಯುತ್ತಿರುವ ಮಹಿಳಾ ಸಮುದಾಯವನ್ನು ಕಡೆಗಣಿಸಲಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಿಯಾಂಕಾಗಾಂಧಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹದಿನೈದು ಸಾವಿರ ರೂ. ಹಾಗೂ ಸಹಾಯಕಿಯರಿಗೆ ಹತ್ತು ಸಾವಿರ ರೂ.ಗಳ ಗೌರವ ಧನ ನೀಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಗೌರವಧನ ಸಿಗುತ್ತಿಲ್ಲ. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಡಿ ಗಂಟು ಮೂರು ಲಕ್ಷ ರೂ.ಗಳನ್ನು ಕೊಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಲ್ಲಿ ಮೀಸಲಿಟ್ಟಿದ್ದ 28 ಸಾವಿರ ಕೋಟಿ ರೂ. ಬಜೆಟ್‍ನಲ್ಲಿ ಹತ್ತು ಸಾವಿರ ರೂ.ಗಳನ್ನು ಕಡಿತಗೊಳಿಸಲಾಗಿದೆ. ಬಜೆಟ್ ಗಾತ್ರವನ್ನು 48 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಬೇಕಿತ್ತು. ಕೇಂದ್ರ ಸರ್ಕಾರ ಮೂರು ಸಾವಿರದ ಐದುನೂರು ಹಾಗೂ ರಾಜ್ಯ ಸರ್ಕಾರ ಎಂಟು ಸಾವಿರದ ಐದು ನೂರು ರೂ.ಗಳನ್ನು ಕೊಡುತ್ತಿದೆ. ಇದರಿಂದ ಜೀವನ ಮಾಡುವುದು ಕಷ್ಟ. ಯಾವುದೇ ಭದ್ರೆತೆಯಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿಯುತ್ತಿದ್ದಾರೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸ್ಕೀಂ ವರ್ಕ್‍ರ್ಸ್‍ಗಳ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಭಾಗ್ಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ, ಖಜಾಂಚಿ ವಿನೋದಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಮ್.ಸಾವಿತ್ರಮ್ಮ, ರಾಧಮ್ಮ, ರತ್ನಮ್ಮ, ಎ.ಐ.ಟಿ.ಯು.ಸಿ. ತಾಲ್ಲೂಕು ಕಾರ್ಯದರ್ಶಿ ಈ.ಸತ್ಯಕೀರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.