ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದನ್ನು ಹರಳಯ್ಯ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಒಳ ಮೀಸಲಾತಿಗಾಗಿ ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ವಿವಿಧ ಸಂಘಟನೆಗಳು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ಅನೇಕ ಮಠಾಧೀಶರುಗಳು ನಡೆಸಿದ ಹೋರಾಟಕ್ಕೆ ಸುಪ್ರಿಂ ಕೊರ್ಟ್ ತೀರ್ಪು ಶಕ್ತಿ ತುಂಬಿದಂತಿದೆ. ಪಾದಯಾತ್ರೆ, ಸೈಕಲ್ ಜಾಥ, ಅರೆಬೆತ್ತಲೆ ಮೆರವಣಿಗೆ, ಪಂಜಿನ ಮೆರವಣಿಗೆ ಡಿ.ಸಿ.ಕಚೇರಿಗೆ ಮುತ್ತಿಗೆ, ಶಾಸಕರ ಮನೆ ಎದುರು ಧರಣಿ, ಮೈಮೇಲೆ ಮಲ ಸುರಿದುಕೊಂಡಿರುವ ಪ್ರಕರಣಗಳು ಅಲ್ಲಲ್ಲಿ ಜರುಗಿದೆ. ಕಠಿಣ ಹೋರಾಟಕ್ಕೆ ಸಿಕ್ಕ ಪ್ರತಿಫಲ. ರಾಜ್ಯದ ಮುಖ್ಯಮಂತ್ರಿ ತಡ ಮಾಡದೆ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ರೊಚ್ಚಿಗೇಳಬೇಕಾಗುತ್ತದೆಂದು ಎಚ್ಚರಿಸಿದರು.
ಹನುಮಂತಪ್ಪ ದುರ್ಗ ಮಾತನಾಡಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯಲ್ಲಿನ ಅಸ್ಪøಶ್ಯರನ್ನು ಗುರಿತಿಸಿ ಆಯಾ ಜಾತಿಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಆಯಾ ರಾಜ್ಯಗಳಿಗೆ ಅಧಿಕಾರ ನೀಡಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್ ತೀರ್ಪಿನಂತೆ ಆದೇಶ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ನಗರಂಗೆರೆ ದೇವರಾಜ್, ನ್ಯಾಯವಾದಿ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.