ಬೆಂಗಳೂರು, (ಅ.12) : ಶಾಲಾ-ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಧರಿಸುವ ಹಿಜಾಬ್ (ಶಿರಸ್ತ್ರಾಣಗಳ) ಮೇಲಿನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಬಹುನಿರೀಕ್ಷಿತ ಅರ್ಜಿ ವಿಚಾರಣೆಯ ತೀರ್ಪನ್ನು ಗುರುವಾರ ಇಬ್ಬರು ನ್ಯಾಯಾಧೀಶರ ಪೀಠ ನೀಡುವ ನಿರೀಕ್ಷೆಯಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು.
ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಈ ವಾರ ಈ ಅರ್ಜಿಗಳ ತೀರ್ಪು ನಿರೀಕ್ಷಿಸಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಾದದ ಸಮಯದಲ್ಲಿ, ಅರ್ಜಿದಾರರ ಪರ ಹಾಜರಾದ ವಕೀಲರು, ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವುದರಿಂದ ಅವರು ತರಗತಿಗಳಿಗೆ ಹಾಜರಾಗುವುದನ್ನು ತಡೆಹಿಡಿದಂತಾಗುತ್ತದೆ ಈ ಮೂಲಕ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದರು.
ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಫೆಬ್ರುವರಿ 5, 2022 ರಂದು ಆದೇಶವನ್ನು ನೀಡಿತ್ತು.
ಫೆಬ್ರವರಿ 5, 2022 ರ ರಾಜ್ಯ ಸರ್ಕಾರದ ಆದೇಶವನ್ನು ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.ನಂತರ ಇದೀಗ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.