ಹಾಸನ: ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಸ್ಥಾನ ಇಂದಿನಿಂದ ಆರಂಭವಾಗಿದೆ. ಆದರೆ ಮೊದಲ ದಿನ ಭಕ್ತಾಧಿಗಳಿಗೆ ಪ್ರವೇಶವಿಲ್ಲ. ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ತಾಯಿ ಹಾಸನಾಂಬೆ ದರ್ಶನ ಅಕ್ಟೋಬರ್ 27ರ ತನಕ ದರ್ಶನ ಭಾಗ್ಯ ನೀಡಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಓಪನ್ ಮಾಡಲಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 12 ಗಂಟೆ 12 ನಿಮಿಷಕ್ಕೆ ಗರ್ಭಗುಡಿಗೆ ಹಾಕಿದ್ದ ಬೀಗ ತೆರೆದ ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾಮಂಗಳಾರತಿ ಮಾಡಿ ಪೂಜೆ ನೆರವೇರಿಸಿದರು. ದೇಗುಲದ ಗರ್ಭಗುಡಿ ತೆರೆದು ಒಂದು ಗಂಟೆಗಳ ಕಾಲ ಪೂಜೆ ಮಾಡಿ ಮತ್ತೆ ಒಂದೂವರೆ ಗಂಟೆಗೆ ಬಾಗಿಲು ಹಾಕಿದ್ದಾರೆ.
ಮೊದಲ ದಿನ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಆದರೆ 12 ದಿನಗಳ ಕಾಲ ತಾಯಿ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತಿವರ್ಷ ಬಾಗಿಲು ತೆಗೆದು ಪೂಜೆ ಸಲ್ಲಿಸಿದ ಮೇಲೆ ಅಂದಿನಿಂದಲೇ ಭಕ್ತರಿಗೆ ತಾಯಿ ದರ್ಶನ ಭಾಗ್ಯ ಸಿಗುತ್ತಿತ್ತು. ಆದರೆ ಈ ಬಾರಿ ಅರ್ಚಕರು ಏಕಾ ಏಕಿ ಗರ್ಭಗುಡಿಗೆ ಬೀಗ ಹಾಕಿದ್ದಾರೆ. ಮೊದಲ ದಿನ ದರ್ಶನ ಇಲ್ಲ ಎಂಬ ಮಾಹಿತಿಯ ನಡುವೆಯೂ ಭಕ್ತರ ನೂಕು ನುಗ್ಗಲಾಗಿದೆ.