ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಠೇವಣಿದಾರರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆ ನಡೆಸುವ ಭರವಸೆ ನೀಡಿದ್ದ ಬೆನ್ನಲ್ಲೇ, ಧನ್ಯವಾದ ತಿಳಿಸಲು ಠೇವಣಿದಾರರು ಆಗಮಿಸಿದ್ದಾರೆ.
ನಿನ್ನೆ ಕೂಡ ಪ್ರಿಯಾಂಕ ಗಾಂಧಿ ಅವರನ್ನ ಭೇಟಿಯಾಗಿದ್ದ ಠೇವಣಿದಾರರು, ಈ ವೇಳೆ ರಾಜ್ಯ ಸರ್ಕಾರ ನಿರ್ದೇಶನ ನೀಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ಹೀಗಾಗಿ ಇಂದು ಡಿಸಿಎಂ ಡಿಕೆಶಿ ಭೇಟಿಯಾಗಿದ್ದಾರೆ. ಸಾಕಷ್ಟು ಅನ್ಯಾಯ ಆಗಿದೆ ಎಂದು ಡಿಕೆಶಿ ಮುಂದೆ ನೋವು ತೋಡಿಕೊಂಡಿದ್ದಾರೆ. ಕೋಟಿ ಕೋಟಿ ಕಳೆದುಕೊಂಡಿದ್ದೇವೆ. ನ್ಯಾಯ ಕೇಳೋಕೆ ಹೋದ್ರೆ ಯಾವುದೇ ಪರಿಹಾರ ಇಲ್ಲ. ಇದರಲ್ಲಿ ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಇದಾರೆ ಸರ್.
ಮೂರು ವರ್ಷದಿಂದ ಒಂದು ದೂರು ಕೂಡ ದಾಖಲಾಗಿಲ್ಲ ಸರ್. ಶಂಕರ್ ಗುಹಾ ಅವರು ಬಂದ ಮೇಲೆ ದೂರು ದಾಖಲಾಗಿದೆ ಸರ್ ಎಂದು ಗೋಳಾಡಿದಾಗ, ನಾನು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ ಎಂದು ಡಿಕೆಶಿ ಸಮಾಧಾನ ಮಾಡಿದ್ದಾರೆ. ಮನವಿ ಪತ್ರವನ್ನ ಸಿಬ್ಬಂದಿಗೆ ನೀಡಿ ಮುಖ್ಯಮಂತ್ರಿಗಳಿಗೆ ಲೆಟರ್ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.