ಚಿತ್ರದುರ್ಗ, ಆಗಸ್ಟ್. 30 : ಸರ್ಕಾರಿ ಶಾಲಾ-ಕಾಲೇಜು ಮಕ್ಕಳು ಹೆಚ್ಚು ಬುದ್ಧಿವಂತರು ಎಂಬುದಕ್ಕೆ ಐಎಎಸ್, ಕೆಎಎಸ್ ಸೇರಿ ಉನ್ನತ ಹುದ್ದೆಗಳಲ್ಲಿರುವವರೇ ಸಾಕ್ಷಿ ಎಂದು ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಹೇಳಿದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ, ರೋವರ್ಸ್, ಎನ್ನೆಸ್ಸೆಸ್ ಘಟಕಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ಇಂದು ಉನ್ನತ ಸ್ಥಾನಮಾನದಲ್ಲಿದ್ದಾರೆ. ಅದಕ್ಕೆ ಕಾರಣ ಛಲ-ಗುರಿ. ನೀವು ಕೂಡ ಅವರ ಹಾದಿಯಲ್ಲಿ ಸಾಗಲು ಕಲಿಕೆಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಉನ್ನತ ಸ್ಥಾನಮಾನ ಗಳಿಸಿದ ಬಳಿಕ ಪಾಲಕರು, ಶಿಕ್ಷಕರು, ಅಕ್ಷರ ಕಲಿಸಿಕೊಟ್ಟ ಶಾಲೆಯನ್ನು ಮರೆಯಬಾರದು. ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳ ಕಲಿಕೆಗೆ ಉದಾರವಾಗಿ ದಾನ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿದರು.
ಬಾಲಕರ ಸರ್ಕಾರಿ ಜೂನಿಯರ್ ಕಾಲೇಜ್ ದಾಖಲಾತಿಗೆ ಈ ಹಿಂದೆ ಪೈಪೋಟಿ ಇತ್ತು. ಈಗಲೂ ಅಂತಹ ವಾತಾವರಣ ಮರುನಿರ್ಮಾಣ ಮಾಡಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಕಡಿಮೆ ಸೌಲಭ್ಯ, ಹೆಚ್ಚು ಸಾಧನೆ ಹಾದಿಯಲ್ಲಿರುವ ಈ ಕಾಲೇಜು ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಪಿಡಬ್ಲುೃಡಿ ಎಇಇ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಲಾಗಿದೆ. ಜತೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಜತೆಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ಕಾಲೇಜು ಕಟ್ಟಡ ಹೊಸರೂಪ ಪಡೆದುಕೊಳ್ಳುವ ರೀತಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿ ಸೌಲಭ್ಯಗಳು ಕಡಿಮೆ ಇದೆ. ಆದರೂ ಪ್ರತಿಭಾವಂತ ಮಕ್ಕಳ ಸಂಖ್ಯೆ ಅಧಿಕ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಿದರೆ ಫಲಿತಾಂಶ ಹೆಚ್ಚು ನಿರೀಕ್ಷೆ ಮಾಡಬಹುದು. ಉತ್ತಮ ಬೋಧಕರು, ಸಿಬ್ಬಂದಿ ಇದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಆಸಕ್ತಿ ಮಾದರಿ ಆಗಿದೆ. ಜತೆಗೆ ಸಮಾಜ ಕೂಡ ಕೈಜೋಡಿಸಬೇಕಿದೆ ಎಂದರು.
ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಆರ್.ಮಂಜುನಾಥ್ ಮಾತನಾಡಿ, ಮಾತು ಕೊಟ್ಟರೇ ಅದನ್ನು ಪರಿಪಾಲಿಸುವಲ್ಲಿ ಶಾಸಕ ಕೆ.ಸಿ.ವೀರೇಂದ್ರ ಮತ್ತು ಸಹೋದರ ಕೆ.ಸಿ.ನಾಗರಾಜ್ ಮಾದರಿ ಆಗಿದ್ದಾರೆ. ಆದ್ದರಿಂದ ಈ ಕಾಲೇಜು ಜೀರ್ಣೋದ್ಧಾರ ಖಚಿತವಾಗಿ ಆಗಲಿದೆ. ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಶಾಸಕರು, ಸರ್ಕಾರ ಅನುದಾನ ಅಥವಾ ವೈಯಕ್ತಿಕವಾಗಿ ಹಣ ವೆಚ್ಚ ಮಾಡಿಯಾದರೂ ಸರ್ಕಾರಿ ಕಾಲೇಜು ಅಭಿವೃದ್ಧಿಗೆ ಕೆ.ಸಿ.ನಾಗರಾಜ್ ಮುಂದಾಗುತ್ತಾರೆ ಎಂಬ ವಿಶ್ವಾಸ ಇದೆ. ಒಟ್ಟಿನಲ್ಲಿ ಆರು ತಿಂಗಳಲ್ಲಿ ಕಾಲೇಜು ಕಟ್ಟಡ ನಳನಳಿಸಬೇಕು. ಈ ಮೂಲಕ ಶಾಸಕರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ, ನಿವೃತ್ತ ಉಪನ್ಯಾಸಕ ಎನ್.ನರಸಿಂಹಮೂರ್ತಿ ಮಾತನಾಡಿ, ಈ ಕಾಲೇಜಿನಲ್ಲಿ ಅತ್ಯಂತ ಹಿಂದುಳಿದ ವರ್ಗದ, ಬಡಜನರ ಮಕ್ಕಳು ಓದುತ್ತಿದ್ದು, ಇದರ ಅಭಿವೃದ್ಧಿ ಜನಪ್ರತಿನಿಧಿಗಳ ಹೊಣೆಗಾರಿಕೆ ಆಗಿದೆ ಎಂದರು.
ಹಿರಿಯ ಉಪನ್ಯಾಸಕ ಪ್ರೊ.ಬಿ.ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿಯೇ ಅತ್ಯಂತ ಹಳೇ ಕಟ್ಟಡ. ಇತಿಹಾಸ ಹೊಂದಿರುವ ಕಾಲೇಜ್ 96 ಎಕರೆ ಜಾಗ ಹೊಂದಿತ್ತು. ಆದರೆ, ನಮ್ಮಿಂದ ಅನೇಕ ಕಚೇರಿ, ಕಾಲೇಜು ಇತರ ಕಾರಣಕ್ಕೆ ಜಾಗ ಪಡೆದು ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಜಾಗ ದಾನ ಕೊಟ್ಟ ಈ ಕಾಲೇಜಿನ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಎಂದು ಬೇಸರಿಸಿದರು.
ಪ್ರಸ್ತುತ ವಿವಿಧ ಕಾರಣಕ್ಕೆ ಅನೇಕ ಸರ್ಕಾರಿ ಪಿಯು ಕಾಲೇಜು ಬಾಗಿಲು ಹಾಕುತ್ತಿದ್ದರೆ, ಈ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತದೆ. ಆದರೆ, ಇಲ್ಲಿ ಮೂಲ ಸೌಲಭ್ಯ ಇಲ್ಲ. ಮಳೆಗಾಲದಲ್ಲಿ ಜೀವಭೀತಿ ಎದುರಾಗುತ್ತದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೌಚಗೃಹ ಕಳಪೆ ಆಗಿದೆ. ನಾವು ಯಾರನ್ನೂ ಕೇಳುವುದು ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಎಂದು ಹೇಳಿದರು.
ಪ್ರೌಢಶಾಲೆ, ಪಿಯು ಶಿಕ್ಷಣ ಕಚೇರಿಗೆ ಇದೇ ಕಟ್ಟಡದಲ್ಲಿ ಕೊಠಡಿಗಳನ್ನು ನೀಡಿದ್ದೇವೆ. ಜತೆಗೆ ಅನೇಕ ಪರೀಕ್ಷೆಗಳು, ಮತ ಎಣಿಕೆ ಕಾರ್ಯ ಹೀಗೆ ವಿವಿಧ ಕಾರಣಕ್ಕೆ ಕಾಲೇಜನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ಕಾಲೇಜ್ ಜೀರ್ಣೋದ್ದಾರಕ್ಕೆ ಯಾರೋಬ್ಬರೂ ಮುಂದಾಗುತ್ತಿಲ್ಲವೆಂದು ಅಳಲು ತೋಡಿಕೊಂಡರು.
ನಮ್ಮ ಕಾಲೇಜಿಗೆ ಶಾಸಕರ ಸಹೋದರ, ಕೆಡಿಪಿ ಸದಸ್ಯ, ಸಾಮಾಜಿಕ ಕಾಳಜಿ ಹೊಂದಿರುವ ನಾಗರಾಜ್ ಆಗಮಿಸಿದ್ದಾರೆ. ನಾವು ಅವರಲ್ಲಿ ಹಕ್ಕೋತ್ತಾಯ ಮಾಡುತ್ತೇವೆ. ಈ ಕಾಲೇಜು ಜೀರ್ಣೋದ್ಧಾರಕ್ಕೆ ಸಂಕಲ್ಪ ಮಾಡಬೇಕೆಂದು ಕೋರಿದರು.
ನಿವೃತ್ತ ಉಪನ್ಯಾಸಕಿ ಶೈಲಾ ಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು. ಆಗ ಮಾತ್ರ ಶಿಕ್ಷಣಕ್ಕೆ ಗೌರವ ಲಭಿಸಲಿದೆ. ಸದಾ ಅನೇಷಣೆ, ಸಂಶೋಧನೆಗೆ ಆದ್ಯತೆ ನೀಡಬೇಕು. ಆಗ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕೆಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಉಪನ್ಯಾಸಕರಾದ ಚನ್ನಬಸಪ್ಪ, ದೊಡ್ಡಯ್ಯ, ಡಾ.ಗುರುನಾಥ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಬಿ.ಆರ್.ಶಿವಕುಮಾರ್, ಮಹೇಶಬಾಬು, ದೇವೆಂದ್ರಪ್ಪ, ಡಾ.ಹೇಮಂತರಾಜ್, ನಗರಸಭೆ ಮಾಜಿ ಸದಸ್ಯ ಎಸ್.ಶ್ರೀರಾಮ್, ಶ್ರೀನಿವಾಸ್ ಇತರರಿದ್ದರು.