ಚಳ್ಳಕೆರೆ, (ಜೂ.08) : ಇರುವುದೊಂದೇ ಭೂಮಿ. ಈ ಭೂಮಿ ನಮ್ಮ ತಾಯಿ ಇದ್ದಂತೆ. ಈ ಭೂಮಿಯಲ್ಲಿನ ಯಾವುದೇ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಉಪಯೋಗಿಸುವುದು ಅಪರಾಧ. ಕಾನೂನಿನ ತಿಳಿವಳಿಕೆ ಇಲ್ಲದೆ ನೀನು ಒತ್ತುವರಿ ಮಾಡಿಕೊಂಡಿದ್ದೀಯ ಮುಂದೆ ಇಂತಹ ಯಾವುದೇ ಕೃತ್ಯಕ್ಕೆ ಕೈ ಹಾಕಬಾರದು ಎಂದು ತಹಶಿಲ್ದಾರ್ ಎನ್. ರಘುಮೂರ್ತಿ ಹೇಳಿದರು.
ತಾಲೂಕಿನ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಸರ್ವೇ ನಂಬರ್ 27 /4ರಲ್ಲಿ ಕಳೆದ 15 ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯ ಎರಡು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡ ವೀರಭದ್ರಪ್ಪನಿಗೆ ಎಚ್ಚರಿಕೆ ನೀಡಿದರು.
ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿಯ ಮನವಿಗೆ ಮೇರೆಗೆ
ತಾಲೂಕು ಸರ್ವೆಯರ್, ನಾಯಕನಹಟ್ಟಿ ಪೊಲೀಸ್ ಉಪನಿರೀಕ್ಷಕ ಶಿವರಾಜ್ ಮತ್ತು ಕಂದಾಯ ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಆಗಮಿಸಿ, ಒತ್ತುವರಿ ಆಗಿರುವುದು ಖಚಿತಪಡಿಸಿಕೊಂಡು ಜೆಸಿಬಿ ಮೂಲಕ ಟ್ರಂಚ್ ಕೊರೆಸಿ ಸರ್ಕಾರದ ವಶಕ್ಕೆ ಪಡೆದರು.
ಸರ್ಕಾರಿ ಸ್ವತ್ತುಗಳಾದ ಕೆರೆಕಟ್ಟೆ, ದಾರಿ, ಗೋಮಾಳ ಮತ್ತು ಕಾವಲುಗಳ ಜಮೀನುಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮ ಮಾಡಬಾರದು. ಉಳಿದಂತೆ ಕಂದಾಯ ಇಲಾಖೆಯಿಂದ ಕೊಡ ಮಾಡುವಂತಹ ಎಲ್ಲ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಾಲೂಕು ಆಡಳಿತ ವತಿಯಿಂದ ಪೂರೈಸಲಾಗುವುದು. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬಹಳ ಮುಖ್ಯ ಶಾಂತಿಭಂಗ ಕಡದವ ಯಾವುದೇ ಕೆಲಸಕ್ಕೆ ಕೈ ಹಾಕಬಾರದು ಸಾಮರಸ್ಯದ ಜೀವನಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ರೇವಣ್ಣ, ರಾಜಸ್ವನಿರೀಕ್ಷಕರ ಚೇತನ್ ಕುಮಾರ್, ತಾಲೂಕು ಸರ್ವೆಯರ್ ಪ್ರಸನ್ನಕುಮಾರ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು