ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮಾ.14): ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಮತ್ತು ತುರುವನೂರು ರಸ್ತೆಯಲ್ಲಿರುವ ಹೆಚ್.ಎಸ್.ಬಿ.ಸಿ. ಜೀವ ವಿಮಾ ಶಾಖೆಯವರು ಅಸಂಘಟಿತ ಕಾರ್ಮಿಕಳಾದ ಜಿ.ಎ.ರೂಪ ಇವರಿಂದ ಹದಿಮೂರು ಲಕ್ಷದ ಐವತ್ತಾರು ಸಾವಿರ ರೂ.ಗಳನ್ನು ಪಾವತಿಸಿಕೊಂಡು ಪಾಲಿಸಿ ಹಣ ನೀಡದೆ ಮೋಸ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
7-3-2017 ರಿಂದ 7-3-2024 ರ ಅವಧಿಯವರೆಗೆ ಪಾಲಿಸಿಯನ್ನು ಪಡೆದಿದ್ದು, ಪ್ರೀಮಿಯಂ ಮೊತ್ತವಾಗಿ ಆರು ಲಕ್ಷ ಎಪ್ಪತ್ತೆಂಟು ಸಾವಿರ ರೂ.ಗಳನ್ನು ಜಿ.ಎ.ರೂಪ ಎರಡು ವರ್ಷ ಪಾವತಿ ಮಾಡಿದ್ದಾರೆ.
ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಸದರಿ ಪಾಲಿಸಿಯ ಕಂತಿನ ಹಣವನ್ನು ಪಾವತಿ ಮಾಡದೆ ಸ್ಥಗಿತಗೊಳಿಸಲಾಗಿರುತ್ತದೆ. ಪಾಲಿಸಿ ನೀಡುವಾಗ ಕೂಲಂಕುಷವಾಗಿ ಚರ್ಚಿಸದೆ ಷರತ್ತು ಮತ್ತು ನಿಯಮಗಳನ್ನು ತಿಳಿಸದೆ ನಿಗೂಢವಾಗಿರಿಸಿ ವಂಚನೆ ಮಾಡಲಾಗಿದೆ.
ಈಗಾಗಲೇ ಎರಡು ವರ್ಷದ ವಿಮಾ ಕಂತನ್ನು ಪಾವತಿಸಿದ್ದು, ಬ್ಯಾಂಕ್‍ನವರಿಂದ ಯಾವುದೇ ರೀತಿಯ ಪತ್ರ ವ್ಯವಹಾರವಿಲ್ಲದಂತಾದಾಗ ಪಾಲಿಸಿಯನ್ನು ರದ್ದುಗೊಳಿಸುವಂತೆ ಕೇಳಿಕೊಂಡರು ಪಾಲಿಸಿಗೂ ನಿಮಗೂ ಯಾವುದೇ ಸಂಬಂಧವಿಲ್ಲವೆಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ವಿಮಾ ಕಂಪನಿ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ಹತ್ತು ಲಕ್ಷದ 84 ಸಾವಿರದ ಎಂಟು ನೂರು ರೂ. ಹಾಗೂ ಬಡ್ಡಿ ಹಣವನ್ನು ಕೊಡಿಸುವಂತೆ ಅಪರ ಜಿಲ್ಲಾಧಿಕಾರಿಯವರಲ್ಲಿ ಕೋರಿದರು.
ಎಲ್ಲಾ ಕಾರ್ಮಿಕರಿಗೆ ಕೆಲಸದ ಕಿಟ್‍ಗಳನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿರುವ ಸುಮಾರು ಹದಿನೈದು ಸಾವಿರ ನೊಂದಾಯಿತ ಟೈಲ್ಸ್ ಕಾರ್ಮಿಕರಿಗೆ ಟೈಲ್ಸ್ ಮತ್ತು ಗ್ರಾನೈಟ್ ಕಿಟ್‍ಗಳನ್ನು ಕೂಡಲೇ ವಿತರಿಸುವಂತೆ ಇದೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷರುಗಳಾದ ಕೆ.ಗೌಸ್‍ಪೀರ್, ನರಸಿಂಹಸ್ವಾಮಿ ಎಂ.ಆರ್. ನಾದಿ ಆಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಖಜಾಂಚಿ ಡಿ.ಈಶ್ವರಪ್ಪ, ನಿರ್ದೇಶಕರುಗಳಾದ ಸಲೀಂ, ರಾಜಪ್ಪ, ರಾಜಣ್ಣ, ಇಮಾಮ್, ತಿಮ್ಮಯ್ಯ, ಫೈರೋಜ್, ಗೌಸ್‍ಖಾನ್, ತಿಪ್ಪೇಸ್ವಾಮಿ, ಈ.ರಾಘವೇಂದ್ರ, ರಫಿ, ಪ್ರಸನ್ನ, ಲಿಂಗರಾಜು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.