ಚಿತ್ರದುರ್ಗ. ಜೂನ್.25 : ಜಿಟಿಟಿಸಿಯು ವಿದ್ಯಾರ್ಥಿಗಳಿಗೆ ಒಂದು ಉಜ್ವಲ ಭವಿಷ್ಯಕ್ಕೆ ಅಡಿಪಾಯ ನೀಡುತ್ತದೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜು ಹೇಳಿದರು.
ನಗರದ ಕುಂಚಿಗನಾಳ್ ಕಣಿವೆ ಮಾರಮ್ಮ ದೇವಸ್ಥಾನದ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಮೊದಲನೇ ಸೆಮಿಸ್ಟರ್‍ಗೆ ಪ್ರವೇಶಾತಿ ಪಡೆದಂತಹ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ತರಗತಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಟಿಟಿಸಿ ಸಂಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರಿಪೂರ್ಣ ರೂಪದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪ್ರಮುಖ ಪಾತ್ರ ಹೊಂದಿರುತ್ತದೆ. ವಿದ್ಯಾರ್ಥಿಗಳು ಅವರ ಜವಾಬ್ದಾರಿಯನ್ನು ಅರ್ಥೈಸಿಕೊಂಡು ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಬಿ.ಎಸ್.ಸುಹಾಸ್ ಮಾತನಾಡಿ, ಜಿಟಿಟಿಸಿಯಲ್ಲಿ ನಡೆಸುತ್ತಿರುವ ಮೂರು ಡಿಪ್ಲೋಮಾ ಕೋರ್ಸ್‍ಗಳಾದಂತಹ ಟೂಲ್ ಅಂಡ್ ಡೈ ಮೇಕಿಂಗ್, ಮೆಕಟ್ರಾನಿಕ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್‍ಗಳಲ್ಲಿ ಉಳಿಕೆಯಾದಂತಹ ಸೀಟುಗಳ ಪ್ರವೇಶಾತಿಗೆ ಮೊದಲ ಬಂದವರಿಗೆ ಮೊದಲ ಆದ್ಯತೆ ನೀಡಿ ಪ್ರವೇಶಾತಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ದೇವರಾಜ್, ಜಿಟಿಟಿಸಿ ಕಾಲೇಜು ಆಡಳಿತ ವಿಭಾಗದ ಮುಖ್ಯಸ್ಥ ಕೆ.ಪಿ.ಕಾಟೇಗೌಡ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.