ಚಿತ್ರದುರ್ಗ: ಅಮಾಯಕರ ಆಸ್ತಿ ಕಬಳಿಕೆ ಹಿನ್ನೆಲೆಯಲ್ಲಿ ಶಾಸಕ ಎಂ.ಚಂದ್ರಪ್ಪ ಕುಟುಂಬದ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ.
ಜೀವಂತ ಇದ್ದಾಗ ಶ್ರೀಧರ್ ಎಂಬ ವ್ಯಕ್ತಿ ನಾಗರಾಜ್ ಎಂಬಾತನಿಗೆ ಬರೆದುಕೊಟ್ಟಿದ್ದ ಪವರ್ ಆಫ್ ಅಟಾರ್ನಿಯನ್ನು ಶ್ರೀಧರ್ ಮೃತಪಟ್ಟ ಬಳಿಕ ಅಕ್ರಮವಾಗಿ ಆಸ್ತಿಯನ್ನು ಶಾಸಕ ಚಂದ್ರಪ್ಪ ಕುಟುಂಬದ ಹೆಸರಿಗೆ ನೋಂದಣಿ ಮಾಡಲಾಗಿದೆ.
ಈ ಸಂಬಂಧ ಶ್ರೀಧರ್ ಸಹೋದರಿ ಪದ್ಮಜಾ ತನಗೆ ಆಗಿರುವ ಅನ್ಯಾಯದ ವಿರುದ್ಧ ನೀಡಿದ ದೂರನ್ನು ಪೊಲೀಸರು ಸಹ, ಶಾಸಕ ಚಂದ್ರಪ್ಪ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ಕೊನೆಗೆ ಕೋರ್ಟ್ ಮೊರೆ ಹೋಗಿ ಚಂದ್ರಪ್ಪ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಪದ್ಮಜಾ ಎಂಬ ಮಹಿಳೆ ಮೊದಲ ಗೆಲುವು ಸಾಧಿಸಿದ್ದಾರೆ.
ಮಹಿಳೆಯ ಏಕಾಂಗಿ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದರಿಂದ ತನ್ನ ಕುಟುಂಬ ಜೈಲುಪಾಲು ಆಗುವ ಭೀತಿಗೆ ಶಾಸಕ ಚಂದ್ರಪ್ಪ ಒಳಗಾಗಿದ್ದು, ಅಕ್ರಮವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ.
ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿಕೊಂಡು ಬೆದರಿಕೆ ಹಾಕಿರುವ ಚಂದ್ರಪ್ಪ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ರಿಪೋರ್ಟ್ ಹಾಕುವಂತೆ ಒತ್ತಡ ಹಾಕಿದ್ದಾರೆ.
ಕೆಲ ಅಧಿಕಾರಿಗಳು, ಆ ರೀತಿ ಮಾಡಲು ಆಗುವುದಿಲ್ಲ. ನಮಗೆ ಕೋರ್ಟ್ ಛಿಮಾರಿ ಹಾಕುವ ಸಾಧ್ಯತೆ ಇದೆ ಸರ್ ಎಂದಿದ್ದಕ್ಜೆ ಸಿಟ್ಟಿಗೆದ್ದ ಶಾಸಕ ಚಂದ್ರಪ್ಪ, ಬಿ ರಿಪೋರ್ಟ್ ಹಾಕದಿದ್ದರೆ ನಿನ್ನನ್ನು ನೀರಿಲ್ಲದ ಜಾಗಕ್ಕೆ ಎತ್ತಂಗಡಿ ಮಾಡಿಸುತ್ತೇನೆ ಎಂದು ಭಯ ಹುಟ್ಟಿಸಿದ್ದಾರೆ ಎಂದು ಆಂಜನೇಯ ದೂರಿದ್ದಾರೆ.
ಈ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇರುವುದರಿಂದ ಅನಿವಾರ್ಯವಾಗಿ ಬಿ ರಿಪೋರ್ಟ್ ಹಾಕಿಸಬೇಕು, ಇಲ್ಲದಿದ್ದರೆ ಹೆಂಡತಿ-ಮಕ್ಕಳನ್ನು ಬಿಟ್ಟು ನೀರಿಲ್ಲದ ಜಾಗಕ್ಕೆ ಹೋಗಬೇಕಿದೆ ಎಂದು ನೋವು ತೊಡಿಕೊಂಡಿದ್ದಾರೆ ಎಂದಿದ್ದಾರೆ.
ವರ್ಗಾವಣೆ ಬೆದರಿಕೆವೊಡ್ಡಿ ತನ್ನ ಕುಟುಂಬ ಸದಸ್ಯರ ಬಂಧನ ಆಗದಂತೆ ಈಗಾಗಲೇ ನೋಡಿಕೊಂಡಿದ್ದಾರೆ. ಈಗ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಬಿ ರಿಪೋರ್ಟ್ ಹಾಕಿಸುವ ಪಿತೂರಿ ನಡೆಸುತ್ತಿದ್ದಾರೆ.
ಶಾಸಕ ಸ್ಥಾನವನ್ನು ತನ್ನ ಹಾಗೂ ಕುಟುಂಬದ ರಕ್ಷಣೆಗೆ ಹಾಗೂ ಆಸ್ತಿ ಕಬಳಿಕೆಗೆ ಬಳಸಿಕೊಳ್ಳುತ್ತಿರುವ ಚಂದ್ರಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸ್ಥಳೀಯ ಪೊಲೀಸರು ಅಸಕ್ತರಾಗಿದ್ದಾರೆ.
ಜೊತೆಗೆ ಪ್ರಕರಣ ಸಂಬಂಧ ಪೊಲೀಸರನ್ನು ಮುಂದಿಟ್ಟುಕೊಂಡು ಸಾಕ್ಷ್ಯಾಧಾರಗಳನ್ನು ನಾಶಗೊಳಿಸಲು ಚಂದ್ರಪ್ಪ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಆದ್ದರಿಂದ ಪೊಲೀಸ್ ತನಿಖೆಯಿಂದ ಕಾನೂನು ಹೋರಾಟ ನಡೆಸುತ್ತಿರುವ ಪದ್ಮಜಾ ಮಹಿಳೆಗೆ ನ್ಯಾಯ ದೊರಕುವುದು ಸಾಧ್ಯವಿಲ್ಲ.
ಆದ್ದರಿಂದ ಶಾಸಕ ಚಂದ್ರಪ್ಪ ಕುಟುಂಬ ಆಸ್ತಿ ಕಬಳಿಸಿರುವ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಬೇಕು ಎಂದು ಆಂಜನೇಯ ಒತ್ತಾಯಿಸಿದ್ದಾರೆ.
ಈ ಮೂಲಕ ಅಮಾಯಕರ ಆಸ್ತಿ ಕಬಳಿಸಿರುವ ಇಂತಹ ಹತ್ತಾರು ಪ್ರಕರಣಗಳು ಹೊರಬರಲಿದ್ದು. ಮಹಿಳೆಗೂ ನ್ಯಾಯ ದೊರಕಲಿದೆ ಎಂದಿದ್ದಾರೆ. ಜೊತೆಗೆ ಅಮಾಯಕರ ಆಸ್ತಿ ಕಬಳಿಕೆಗೆ ಕಡಿವಾಣ ಬೀಳಲಿದ್ದು, ದುಷ್ಟ ಎಂ.ಚಂದ್ರಪ್ಪ ಮತ್ತು ಆತನ ಕುಟುಂಬದ ಅಕ್ರಮಕ್ಕೆ ತಡೆ ಬೀಳಲಿದೆ.
ಕೂಡಲೇ ರಾಜ್ಯದ ಮುಖ್ಯಮಂತ್ರಿ, ಗೃಹಸಚಿವರು ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದು, ಬರುವ ಅಧಿವೇಶನದಲ್ಲಿ ದಾಖಲೆ ಸಮೇತ ಧ್ವನಿಯೆತ್ತುವಂತೆ ಮಾಡಲಾಗುವುದು ಎಂದು ಎಚ್. ಆಂಜನೇಯ ತಿಳಿಸಿದ್ದಾರೆ.