ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

suddionenews
1 Min Read

 

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ವಿಧಿವಶರಾಗಿದ್ದಾರೆ. 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನಾಳೆ ಅಂದ್ರೆ ಬುಧವಾರ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಎಲ್ಲಾ ರಾಜಕೀಯ ನಾಯಕರು ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಂದು ಅಂತಿಮ ದರ್ಶನ ಪಡೆಯಲು ಬೆಳಗಾವಿಯಿಂದ ರಾಜಕೀಯ ನಾಯಕರು ಬರಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಬೆಳಗಾವಿಯಲ್ಲಿಯೇ ಇದ್ದು, ನಿಧನದ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಜೊತೆಗೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಯಾಗಿ ಅವರು ಸಲ್ಲಿಸಿರುವ ಸೇವೆ ಅನುಪವಾದದ್ದು. ವಿಶೇಷವಾಗಿ ಅವರು ಮುಖ್ಯಮಂತ್ರಿಯಾಗಿದ್ದಾಗ ಐಟಿ ಬಿಟಿ ಕ್ಷೇತ್ರಗಳ ಬೆಳವಣಿಗೆಗೆ ಅವರು ಕೊಡುಗೆಗೆ ಕರ್ನಾಟಕ ಸದಾ ಋಣಿಯಾಗಿರುತ್ತದೆ. ಮುತ್ಸದ್ದಿ ರಾಜಕಾರಣಿಯಾಗಿದ್ದ ಅವರು ಅಜಾತ ಶತ್ರುವಾಗಿದ್ದರು.‌ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಪ್ರಾರಂಭದ ದಿನಗಳಲ್ಲಿ ಮಾರ್ಗದರ್ಶಕರಾಗಿದ್ದರು. ಕೃಷ್ಣ ಅವರು ಸದಾ ನನ್ನ ಹಿತೈಶಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ” ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬೆಳಗಾವಿಯಿಂದ ಆಗಮಿಸಲು ಎಲ್ಲರೂ ಕಾಯುತ್ತಿದ್ದಾರೆ. ಅವರು ಆಗಮಿಸಿದ ಬಳಿಕ ಎಸ್. ಎಂ. ಕೃಷ್ಣ ಕುಟುಂಬಸ್ಥರ ಜೊತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಮಂಡ್ಯದ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ತಂದೆ ಮತ್ತು ತಾಯಿಯ ಸಮಾಧಿ ಇದೆ. ಇದೇ ಸ್ಥಳದಲ್ಲಿಯೇ ಎಸ್. ಎಂ. ಕೃಷ್ಣ ಅಂತ್ಯಕ್ರಿಯೆ ನಡೆಸುವ ನಿರೀಕ್ಷೆ ಇದೆ.

Share This Article
Leave a Comment

Leave a Reply

Your email address will not be published. Required fields are marked *