ಈ ಬಾರಿ ಪ್ರತಿ ಸಲಕ್ಕಿಂತ ಹೆಚ್ಚಿನ ಬಿಸಿಲು ಇದೆ. ಉಷ್ಣಾಂಶ ಹೆಚ್ಚಾಗಿರುವ ಕಾರಣ ಜನರಂತು ನೊಂದು ಬೆಂದು ಹೋಗಿದ್ದಾರೆ. ಅರ್ಧ ಗಂಟೆ ಹೊರಗೆ ಹೋದರೆ ಸಾಕು, ಸುಸ್ತಾಗಿ ಮನೆಗೆ ಬರುತ್ತಾರೆ. ಭೂಮಿಯ ಉಷ್ಣಾಂಶ ಕಡಿಮೆಯಾಗಬೇಕಾದರೆ ಮಳೆ ಬರಲೇಬೇಕು. ಯುಗಾದಿ ಹಬ್ಬದ ಹಿಂದೆ ಮುಂದೆ ಮಳೆಯಾಗುವುದು ವಾಡಿಕೆ. ಅದರಂತೆ ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ವರುಣ ಧರೆಗಿಳಿದಿದ್ದಾನೆ. ಟ್ಯಾಂಕರ್ ನೀರು ತಂದು ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತಾಪಿ ವರ್ಗಕ್ಕೆ ನಿನ್ನೆ ಮಳೆರಾಯ ಸಂತಸ ನೀಡಿದ್ದಾನೆ. ಈ ಮೂಲಕ ಯುಗಾದಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ.
ನಿನ್ನೆ ಈ ಭಾಗದಲ್ಲೆಲ್ಲಾ ಮಳೆಯಾಗಿದ್ದು, ಜನ ಬಿಸಿಲಿನ ತಾಪದಿಂದ ಕೊಂಚ ತಂಪಾಗಿದ್ದನ್ನು ಫೀಲ್ ಮಾಡಿದ್ದಾರೆ. ದೇವನಗರಿ ದಾವಣಗೆರೆಯಲ್ಲಿ ಮಳೆಯಾಗಿದ್ದು, ಹೆಬ್ಬಾಳು, ಹುಣಸೆಕಟ್ಟೆ, ಮಂಡಲೂರು ಸೇರಿದಂತೆ ಹಲವು ಗ್ರಾಮಗಳಿಗೆ ಸಾಧಾರಣ ಮಳೆಯಾಗಿದೆ. ರಾಜ್ಯದ ಇನ್ನು ಹಲವೆಡೆ ಇಂದು ಕೂಡ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಈಗಾಗಲೇ ಮುನ್ಸೂಚನೆಯನ್ನು ನೀಡಿದೆ.
ಇನ್ನು ಶಿವಮೊಗ್ಗ ಭಾಗದಲ್ಲೂ ನಿನ್ನೆ ರಾತ್ರಿ ಮಳೆಯಾಗಿದೆ. ಸುಮಾರು 20 ನಿಮಿಷಗಳ ಕಾಲ ಮಳೆಯಾಗಿದೆ. ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಜನರ ಮನಸ್ಸನ್ನು ನಿನ್ನೆ ವರುಣರಾಯ ತಂಪಾಗಿಸಿದ್ದಾನೆ. ಹಲವು ಭಾಗಗಳಲ್ಲಿ ಮಳೆ ಬಿಸಿಲಿನ ತಾಪವನ್ನು ಕಡಿಮೆಗೊಳಿಸಿದರೆ ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲೆಲ್ಲಾ ಗುಡುಗು ಸಹಿತ ಮಳೆಯಾಗಿದ್ದು, ಅನಾಹುತಕ್ಕೂ ಕಾರಣವಾಗಿದೆ. ಸಿಡಿಲು ಬಡಿದು ವಿಜಯಪುರದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಒಂದು ಎಮ್ಮೆ, ಎರಡು ಆಕಳು ಕೂಡ ಸಿಡಿಲಿಗೆ ಬಲಿಯಾಗಿದೆ.