ನವದೆಹಲಿ: ಕ್ರಿಮಿನಲ್ ಪಿತೂರಕ, ಪೂಜಾ ಸ್ಥಳದಲ್ಲಿ ಅಪರಾಧ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಿಂದೂ ಧರ್ಮಕ್ಕೆ ಅಗೌರವ ಸೂಚಿಸುವ ಪೋಸ್ಟರ್ ವಿಚಾರಕ್ಕೆ ಉತ್ತರ ಪ್ರದೇಶ ಪೊಲೀಸರು ನಿರ್ಮಾಪಕಿ ಲೀನಾ ಮಣಿಮೇಕಲೈ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಲೀನಾ ತನ್ನ ಸಿನಿಮಾ ಕಾಳಿಯ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಆ ಪೋಸ್ಟರ್ ಬಳಿಕ ವಿವಾದಕ್ಕೀಡಾಗಿದೆ. ದೇವಿಯ ವೇಷಭೂಷಣ ಧರಿಸಿರುವ ಮಹಿಳೆ ತನ್ನ ಕೈನಲ್ಲಿ ಧೂಮಪಾನವನ್ನು ಹಿಡಿದಿದ್ದಾಳೆ. ಇದು ಕಾಳಿಮಾತೆಗೆ ಮಾಡಿದ ಅವಮಾನವೆಂದು ಆಕ್ರೋಶ ಭುಗಿಲೆದ್ದಿದೆ.
ಈ ಸಂಬಂಧ ಈ ಹಿಂದೆ ಬಿಜೆಪಿ ನಾಯಕ ಶಿವಂ ಛಾಬ್ರಾ ಚಿತ್ರ ನಿರ್ಮಾಪಕ ಮಣಿಮೇಕಲೈ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ, ‘ಕಾಳಿ’ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಇಂದು ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ. ದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಅಮೃತಾ ಗುಗುಲೋತ್ ಅವರಿಗೆ ದೂರು ನೀಡಲಾಗಿದೆ. ಐಪಿಸಿಯ ಸೆಕ್ಷನ್ 295ಎ, ಐಟಿ ಆಕ್ಟ್ 2000ದ ಸೆಕ್ಷನ್ 79 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆ 1986 ಸೇರಿದಂತೆ ಲೀನಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಲೀನಾ ವಿರುದ್ಧ ಶಿಕ್ಷೆಗೆ ದೂರುದಾರರು ಒತ್ತಾಯಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಈ ಹಿಂದೆ ಹಲವಾರು ಚಲನಚಿತ್ರಗಳು ಮತ್ತು ಪ್ರದರ್ಶನಗಳು ತೊಂದರೆಗೆ ಸಿಲುಕಿದ್ದವು. ಅನುರಾಗ್ ಬಸು ಅವರ ‘ಲುಡೋ’ ಚಿತ್ರದಲ್ಲಿ ‘ಹಿಂದೂಫೋಬಿಕ್’ ವಿಷಯವನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಿದ್ದಕ್ಕಾಗಿ ಟ್ವಿಟ್ಟರ್‌ಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. 2021 ರಲ್ಲಿ, ಸೈಫ್ ಅಲಿ ಖಾನ್ ಅಭಿನಯದ ವೆಬ್ ಸರಣಿ ‘ತಾಂಡವ್’ ಹಿಂದೂ ದೇವರುಗಳನ್ನು ಕೆಟ್ಟ ಬೆಳಕಿನಲ್ಲಿ ಚಿತ್ರಿಸುವ ಮೂಲಕ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗಿತ್ತು.