ಧಾರವಾಡ: ಕೈಗಾರಿಕಾ ಉದ್ದೇಶಕ್ಕಾಗಿ ರೈತರ ಜಮೀನುಗಳನ್ನ ತೆಗೆದುಕೊಂಡಿದ್ದ KIADB ಕಡೆಯಿಂದ ಬಂದಂತ ಪರಿಹಾರ ಹಣವನ್ನ ಅಧಿಕಾರಿಗಳೇ ನುಂಗಿ ನೀರು ಕುಡಿದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ 9 ಅಧಿಕಾರಿಗಳು ಸೇರಿ 13 ಜನ ಮೇಲೆ ದೂರು ನೀಡಲಾಗಿದೆ. ಇಟಿಗಟ್ಟಿ ಕರೆಪ್ಪ ಪೂಜಾರ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ.
ಇಟಿಗಟ್ಟಿ ಗ್ರಾಮದಲ್ಲಿ ಕರೆಪ್ಪ ಪೂಜಾರ್ ಹೆಸರಿನಲ್ಲಿ ಸುಮಾರು 4.39 ಎಕರೆ ಆಸ್ತಿ ಇದಾಗಿದೆ. ಪಿತ್ರಾರ್ಜಿತ ಆಸ್ತಿಯಾಗಿದ್ದು, 1981ರಿಂದಾನೂ ಕರೆಪ್ಪ ಪೂಜಾರ್ ಹೆಸರಿನಲ್ಲಿಯೇ ಇದೆ. ಇನ್ನು ಈ ಪ್ರದೇಶದಲ್ಲಿ ಕೈಗಾರಿಕಾ ಉದ್ದೇಶವನ್ನು ಹೊಂದಿದ್ದ KIADB ಕರೆಪ್ಪ ಪೂಜಾರ್ ಅವರ ಜಮೀನನ್ನು ವಶಕ್ಕೆ ಪಡೆಯಲಾಗಿತ್ತು. 2021ರಲ್ಲಿ ಈ ಜಮೀನನ್ನು ವಶಕ್ಕೆ ಪಡೆಯಲಾಗಿತ್ತು.
ವಶಕ್ಕೆ ಪಡೆದ ಜಮೀನಿನ ಹಣ ಕರೆಪ್ಪ ಪೂಜಾರ್ ಅವರಿಗೆ ಬರದೆ, ಇನ್ಯಾರದ್ದೋ ಖಾತೆಗೆ ಜಮಾ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. 2.25 ಕೋಟಿ ಹಣವನ್ನು ಬೇರೆಯವರಿಗೆ ವರ್ಗಾವಣೆ ಮಾಡಲಾಗಿದೆ. ತುಕಾರಾಮ್ ಪೂಜಾರ್ ಎಂಬುವವರ ಅಕೌಂಟ್ಗೆ ಹಣವನ್ನು ಅಧಿಕಾರಿಗಳು ಜಮೆ ಮಾಡಿದ್ದಾರೆ. ಇದರಲ್ಲಿ ತಹಶೀಲ್ದಾರ್, KIADB ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಕರೆಪ್ಪ ಪೂಜಾರ್ ದೂರು ನೀಡಿದ್ದಾರೆ. ಕೆಎಲ್ಆರ್ ಡಿವಿಜನ್ನ ಉಪ ತಹಶೀಲ್ದಾರ್ ವೀನಕುಮಾರ್ ತಳವಾರ, ಪ್ರವೀಣ್ ಪೂಜಾರ್, KIADB ಅಧಿಕಾರಿಗಳಾದ ವಸಂತಕುಮಾರ್ ಸಜ್ಜನ್, ಶಂಕರ್ ತಳವಾರ, ಮಹದೇವಪ್ಪ ಶಿಂಪಿ, ಹೇಮಚಂದ್ರ ಚಿಂತಾಮಣಿ, ಮೆಹಬೂಬ ದುಂಡಶಿ, ಕೇಸ್ ವರ್ಕರ್ ಮುದ್ದಿ, ರವಿ ಕುರುಬೆಟ್ಟ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಶಾಮೀಲಾದ ಸಂಬಂಧಿಗಳಾದ ತುಕಾರಾಮ್ ಪೂಜಾರ್, ಕರಿಯಪ್ಪ ಪೂಜಾರ್, ರಾಮಪ್ಪ ಪೂಜಾರ್, ಫಕ್ಕಿರಪ್ಪ ಪೂಜಾರ್ ವಿರುದ್ಧವೂ ದೂರು ನೀಡಿದ್ದಾರೆ. 9 ಅಧಿಕಾರಿಗಳು ಸೇರಿದಂತೆ 13 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಾಗಿದೆ.