ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡಬೇಕಾದವರು ಗಂಡು ಮಕ್ಕಳೇ ಎಂಬ ಪದ್ಧತಿ ಇನ್ನು ಜೀವಂತವಾಗಿದೆ. ಆದರೆ ನಿರೂಪಕಿ ದಿವ್ಯಾ ಆಲೂರು ಇಂದು ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿ, ತಂದೆ – ಮಗಳ ಬಂಧ ಎಷ್ಟು ಗಟ್ಟಿಯಾಗಿತ್ತು ಎಂಬುದನ್ನು ತೋರಿಸಿದ್ದಾರೆ.
ಮಗಳೇ ನಿಂತು ಅಂತ್ಯ ಸಂಸ್ಕಾರ ಮಾಡುವಾಗ ಆ ಮಗಳಿಗೆ ಆದ ನೋವು ಕಡಿಮೆ ಏನು ಅಲ್ಲ. ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಸಾಮಾಜಿಕ ಹೋರಾಟಗಾರ ಆಲೂರು ನಾಗಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಇವರ ಮಗಳು ದಿವ್ಯಾ ಆಲೂರು ಸಾಕಷ್ಡು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಖ್ಯಾತಿ ಪಡೆದಿದ್ದಾರೆ.
ಸದ್ಯ ಅವರ ತಂದೆಯ ಅಂತ್ಯ ಸಂಸ್ಕಾರದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕಷ್ಟಕ್ಕೆ, ಸುಖಕ್ಕೆ ಹೆಣ್ಣು ಮಕ್ಕಳು ಬೇಕು. ಆದ್ರೆ ಅಂತ್ಯ ಸಂಸ್ಕಾರಕ್ಕೆ ಏಕೆ ಅಡ್ಡಿ. ಪಿಂಡ ಇಡುವುದಕ್ಕಾದರೂ ಗಂಡು ಮಗು ಬೇಕು ಅಂತಾನೇ ಹೆಣ್ಣು ಭ್ರೂಣ ಹತ್ಯೆಗಳು ಅದೆಷ್ಟೋ ಕಡೆ ನಡೆದಿರುವುದು. ಕಾಲ ಬದಲಾಗಿದೆ. ನಾವೂ ಒಳ್ಳೆ ಬದಲಾವಣೆಗೆ ತೆರೆದುಕೊಳ್ಳೋಣಾ. ನಾನು ಯಾವ ಸಂಪ್ರದಾಯದ ವಿರೋಧಿಯಲ್ಲ. ಆದರೆ ನಮ್ಮಪ್ಪನ ಅಂತ್ಯ ಸಂಸ್ಕಾರ ಮಾಡುವುದು ನನ್ನ ಹಕ್ಕು ಎಂಬ ದೃಢಭಾವನೆ ಹೊಂದಿರುವವಳು ನಾನು ಎಂದು ಪೋಸ್ಟ್ ಹಾಕಿ ಬರೆದುಕೊಂಡಿದ್ದಾರೆ. ಆ ವಿಡಿಯೋಗೆ ತನ್ನಪ್ಪನ ಜೊತೆಗಿನ ಬಾಂಧವ್ಯದ ಬಗ್ಗೆ ಧ್ವನಿಯನ್ನು ನೀಡಿದ್ದಾರೆ.