ಸುದ್ದಿಒನ್, ಚಿತ್ರದುರ್ಗ, ನವೆಂಬರ್.29 :ನಾಳೆ ಕನಕ ಜಯಂತಿ ಪ್ರಯುಕ್ತ ಅಥವಾ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ
ರಾಜ್ಯದಲ್ಲಿ ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಆರ್.ರಜನಿ ಲೇಪಾಕ್ಷ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಕುರುಬ ಸಮಾಜದ ಜನರು ವಾಸಿಸುತ್ತಿದ್ದು, ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಾಕಷ್ಟು ಹಿಂದೆ ಇದ್ದು, ರಾಜ್ಯದ ಕಟ್ಟ ಕಡೆಯ ಕುರುಬ ಸಮಾಜದ ಅಭಿವೃದ್ಧಿಗೆ ಕುರುಬರ ಅಭಿವೃದ್ಧಿ ಮಂಡಳಿಯ ಅವಶ್ಯಕತೆ ಇರುತ್ತದೆ.ಈಗಾಗಲೇ ರಾಜ್ಯದಲ್ಲಿ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತ, ಉಪ್ಪಾರ, ಈಡಿಗ,ಭೋವಿ,ಗೊಲ್ಲ ಸಮಾಜ,ವಾಲ್ಮೀಕಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ,ಹೀಗೆ ರಾಜ್ಯದ ಎಲ್ಲಾ ಜಾತಿ ಜನಾಂಗಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸರ್ವ ಜನಾಂಗದ ಅಭಿವೃದ್ದಿಗೆ ಹಿಂದಿನ ಮತ್ತು ಇಂದಿನ ಸರ್ಕಾರಗಳು ಶ್ರಮಿಸುತ್ತಿವೆ.
ಪ್ರಸ್ತುತ ಬಾಕಿ ಉಳಿದಿರುವ ಅಭಿವೃದ್ಧಿ ನಿಗಮ ಏಕೈಕ ಕುರುಬ ಸಮಾಜ ಅಭಿವೃದ್ಧಿ ನಿಗಮ. ಆದ್ದರಿಂದ ಕುರುಬರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ನಿಗಮ ಸ್ಥಾಪನೆ ತಮ್ಮ ಅವಧಿಯಲ್ಲಿ ಮಾಡುವ ಮೂಲಕ ಕುರುಬ ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬಬೇಕೆಂದು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.