ಚಿತ್ರದುರ್ಗ, (ಜುಲೈ 11) : ಪ್ರಸ್ತುತ ದಿನಗಳಲ್ಲಿ ಎಣ್ಣೆಕಾಳು ಬೆಳೆಗಳು ರೈತರಿಗೆ ಲಾಭದಾಯಕವಾಗಿದ್ದು, ಉತ್ತಮ ಬೇಡಿಕೆಯೂ ಇದೆ. ಹಾಗಾಗಿ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಉಳಿದ ಆಹಾರ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ. ಎಣ್ಣೆಕಾಳು ಬೆಳೆಯುವುದರಲ್ಲಿ ನಾವು ಹಿಂದುಳಿದಿದ್ದೇವೆ. ಮುಸುಕಿನ ಜೋಳಕ್ಕಿಂತ ಸೋಯಾಬಿನ್ ಬೆಳೆ ಬಹಳ ಉತ್ತಮವಾಗಿದೆ. ಹಾಗಾಗಿ ರೈತರು ಸೋಯಾಬಿನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಹೇಳಿದರು.
ಜುಲೈ 01 ರಿಂದ 11 ರವರೆಗೆ ಜಿಲ್ಲೆಯಲ್ಲಿ 35.1 ಮಿ.ಮೀ ಮಳೆಯಾಗಿದ್ದು, ಶೇ. 125 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.42ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈಚೆಗೆ ಸುರಿದ ಮಳೆಯಿಂದಾಗಿ 2 ವಾಸದ ಮನೆಗಳು ಪೂರ್ಣಗೊಳಗಾಗಿವೆ. 4 ಜಾನುವಾರು ಪ್ರಾಣಹಾನಿಯಾಗಿದ್ದು, ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಗೊಬ್ಬರ, ಬಿತ್ತನೆ ಬೀಜದ ಸಮಸ್ಯೆ ಇಲ್ಲ: ಜಿಲ್ಲೆಯಲ್ಲಿ ಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಸಮಸ್ಯೆ ಇಲ್ಲ. 10,646 ಮೆಟ್ರಿಕ್ ಟನ್ ಗೊಬ್ಬರ ದಾಸ್ತನು ಇದೆ. 2888 ಟನ್ ಯೂರಿಯಾ, 1134 ಡಿಎಪಿ, 561 ಎಂಒಪಿ, 6163 ಕಾಂಪ್ಲೆಕ್ಸ್ ಗೊಬ್ಬರ ಸೇರಿದಂತೆ ಒಟ್ಟು 10,641 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಇದರ ಜೊತೆಗೆ ಸಮರ್ಪಕವಾಗಿ ಬಿತ್ತನೆ ಬೀಜವನ್ನು ಪೂರೈಸಲಾಗಿದೆ. 30,782 ಬಿತ್ತನೆ ಬೀಜ ದಾಸ್ತಾನು ಇದ್ದು, ಹೈಬ್ರಿಡ್ ಜೋಳ, ರಾಗಿ, ಸಜ್ಜೆ, ತೊಗರಿ, ಅಲಸಂದೆ, ಸೂರ್ಯಕಾಂತಿ, ಮುಸುಕಿನ ಜೋಳ, ಸೋಯಾಬಿನ್ ಬೀಜದ ದಾಸ್ತನು ಇದೆ. ಮೊಳಕಾಲ್ಮುರು ಹಾಗೂ ಚಳ್ಳಕೆರೆಯಲ್ಲಿ ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತಿದ್ದು, 12,550 ಕ್ವಿಂಟಾಲ್ ಶೇಂಗಾಬೀಜ ದಾಸ್ತಾನು ಇದ್ದು, ರೈತರ ಅಗತ್ಯಕ್ಕನುಗುಣವಾಗಿ ವಿತರಿಸಲು ಕೃಷಿ ಇಲಾಖೆ ಸಿದ್ಧವಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿಲ್ಲಿ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ರೂ. 441 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಧಾರ್ ಜೋಡಣೆಯಾಗದೇ ಇರುವುರಿಂದ 1500 ರೈತರಿಗೆ ಬೆಳೆ ವಿಮೆ ನೀಡುವುದು ಬಾಕಿ ಇದೆ. ಇನ್ನೂ 10 ದಿನಗಳಲ್ಲಿ ಎಲ್ಲ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು.
ವಿವಿಸಾಗರದಲ್ಲಿ 120.45 ಅಡಿ ನೀರು: ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ 120.42 ಅಡಿ ನೀರು ಇದೆ. ಕಳೆದ 10 ದಿನಗಳಲ್ಲಿ ಜಿಲ್ಲೆಯ ಯಾವುದೇ ಕೆರೆ-ಕಟ್ಟೆಗಳಿಗೆ ಹಾನಿಯಾಗಿರುವುದಿಲ್ಲ. ಕೃಷಿ ಹಾಗೂ ತೋಟಗಾರಿಕೆಯ ಬೆಳೆಹಾನಿ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ ಸಚಿವರಿಗೆ ಮಾಹಿತಿ ನೀಡಿದರು.
ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚನೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯಡಿಯ (ಜೆಜೆಎಂ) ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಹಂತಪ್ಪಗೆ ಸೂಚನೆ ನೀಡಿದರು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಉತ್ತಮ ಗುಣಮಟ್ಟದ ಪೈಪ್‍ಗಳನ್ನು ಅಳವಡಿಸಬೇಕು ಎಂದು ತಾಕೀತು ಮಾಡಿದರು.
ಜೆಜೆಎಂನಡಿಯಲ್ಲಿ ಮೊದಲ ಬ್ಯಾಚ್‍ನಲ್ಲಿ 29 ಕಾಮಗಾರಿಗಳಲ್ಲಿ 23 ಕಾಮಗಾರಿ ಪೂರ್ಣಗೊಂಡಿವೆ. ಬ್ಯಾಚ್ 2 ಮತ್ತು 3ಕ್ಕೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಬ್ಯಾಚ್-4ರಲ್ಲಿ 72 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಡಿಪಿಎಆರ್ ಅನುಮೋದನೆಯಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಹಂತಪ್ಪ ಸಭೆಗೆ ಮಾಹಿತಿ ನೀಡಿದರು.
ವಿಧಾನಸಭಾ ಕ್ಷೇತ್ರವಾರು 20 ಕೊಠಡಿ ಮಂಜೂರು: ಜಿಲ್ಲೆಯಲ್ಲಿ ಈಚೆಗೆ ಮಳೆಯಿಂದಾಗಿ 310 ಶಾಲೆಗಳ 624 ಕೊಠಡಿಗಳು ಶಿಥಿಲಗೊಂಡಿದ್ದವು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರವು ವಿಧಾನಸಭಾ ಕ್ಷೇತ್ರವಾರು ತಲಾ 20 ಕೊಠಡಿಗಳು ಮಂಜೂರು ಮಾಡಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಗೆ 9 ಕೊಠಡಿಗಳು, ಹಿರಿಯ ಪ್ರಾಥಮಿಕ ಶಾಲೆಗಳಿಗೆ 8 ಕೊಠಡಿಗಳು, ಕಿರಿಯ ಪ್ರಾಥಮಿಕ ಶಾಲೆಗಳಿಗೆ 3 ಕೊಠಡಿಗಳು ಸೇರಿದಂತೆ ವಿಧಾನ ಸಭಾ ಕ್ಷೇತ್ರವಾರು 20 ಕೊಠಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಕೃಷಿ ಇಲಾಖೆ ಜಂಟಿನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.