ಹಾಸನ : ಜಿಲ್ಲೆಯಲ್ಲಿ ಬರ ಅಧ್ಯಯನ ಬಳಿಕ ಮಾಜಿ ಸಿಎಂ ಡಿವಿ ಸದಾನಂದ ಗೌಡ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿವಿಎಸ್, ಇದೀಗ ರಾಜಕೀಯದಿಂದಾನೇ ದೂರ ಸರಿದಿದ್ದಾರೆ. ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ. ಇನ್ನು ಹೆಚ್ಚಿನದ್ದನ್ನು ಆಸೆ ಪಡುವುದಿಲ್ಲ ಎಂದು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟರೆ ಪಕ್ಷದಿಂದ ಸಾಕಷ್ಟು ಸಹಾಯ ಆಗಿದ್ದು, ನನಗೇನೆ. ಕಳೆದ 30 ವರ್ಷದಿಂದ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಸಿಎಂ ಆಗಿದ್ದೇನೆ, ಸಂಸದ ಸ್ಥಾನ ಸಿಕ್ಕಿದೆ, ಮೋದಿ ಜೊತೆಗೆ ಕೇಂದ್ರ ಸಚಿವನಾಗಿದ್ದೆ, ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಎಲ್ಲವೂ ಸಿಕ್ಕಿದೆ. ಹೀಗಾಗಿ ಚುನಾವಣಾ ರಾಜಕೀಯದಿಂದ ಮುಂದುವರೆಯಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಬರದ ಬಗ್ಗೆ ಮಾತನಾಡಿ, ನಾವೂ ಬರ ಅಧ್ಯಯನಕ್ಕೆ ಬಂದಾಗ ಮಳೆ ಆರಂಭವಾಗಿದೆ. ಆದರೆ ಈಗ ಮಳೆ ಬಂದರೆ ಯಾವುದೇ ಪ್ರಯೋಜನವಾಗಲ್ಲ ಅನ್ನೋದು ನನ್ನ ಅಭಿಪ್ರಾಯ. ಬರಕ್ಕೆ ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರಗಳು ಪರಿಹಾರ ನೀಡಬೇಕಿದೆ. ಕೇಂದ್ರ ಸರ್ಕಾರದ ಮೇಲೆ ನಾವೂ ಒತ್ತಡ ಹಾಕುತ್ತೇವೆ. ಹಾಸನ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಶೇ. 73ರಷ್ಟು ಮಳೆ ಕೊರತೆ ಎದುರಾಗಿದೆ. ಇದು 125 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಈ ರೀತಿ ಆಗಿರುವುದು. ರೈತರ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯಾದ್ಯಂತ ಇಂದು ಬಿಜೆಪಿ ನಾಯಕರು ಬರ ಅಧ್ಯಯನ ನಡೆಸಿದ್ದಾರೆ.