ಚಳ್ಳಕೆರೆ : ಸಂಜೆ 5 ಗಂಟೆಯೊಳಗೆ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪೂರೈಸಲಾಗುತ್ತದೆ ಎಂದು ಚಳ್ಳಕೆರೆ ತಾಸಿಲ್ದಾರ್ ಎನ್.ರಘುಮೂರ್ತಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ದೇವರೆಡ್ಡಿಹಳ್ಳಿ ಪಂಚಾಯಿತಿಯ ಭೋಗನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ವ್ಯತ್ಯಯವಾಗಿದ್ದು ಇದರಿಂದ ಗ್ರಾಮಸ್ಥರು ಮಧ್ಯರಾತ್ರಿ ಜಿಲ್ಲಾಧಿಕಾರಿಯವರಿಗೆ ಕ್ರಮ ಕೈಗೊಳ್ಳುವಂತೆ ವಾಟ್ಸಾಪ್ ಸಂದೇಶದಲ್ಲಿ ಕೋರಿದ್ದರು.
ಮಾನ್ಯ ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ತಕ್ಷಣ ಕ್ರಮ ವಹಿಸುವಂತೆ ಚಳ್ಳಕೆರೆ ತಹಶೀಲ್ದಾರ್ ಅವರಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ಇಂದು(ಭಾನುವಾರ) ಬೆಳಿಗ್ಗೆ ಒಂಬತ್ತು ಗಂಟೆಗೆ ಎಲ್ಲಾ ಇಲಾಖೆಗಳ ಸಿಬ್ಬಂದಿ ಯೊಂದಿಗೆ ಇಂದು ಭೋಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಒಂದು ವಾರದ ಹಿಂದೆ ಬಿದ್ದ ಮಳೆ ಮತ್ತು ಗಾಳಿಯಿಂದ ಈ ಗ್ರಾಮದಲ್ಲಿ 39 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಇದರಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಕುಡಿಯುವ ನೀರು ಹಾಗೂ ವಿದ್ಯುತ್ತಿಗೆ ತೀವ್ರ ಅಭಾವ ತಲೆದೋರಿತು.
ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮರಾಜು ಮತ್ತು ಕುಡಿಯುವ ನೀರಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ದಯಾನಂದ ಸ್ವಾಮಿ ಇವರೊಂದಿಗೆ ಪರಿಶೀಲಿಸಿ ತಕ್ಷಣ ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು.
ಇಂದು ಸಂಜೆ 5 ಗಂಟೆಯೊಳಗೆ ವಿದ್ಯುತ್ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು. ಸ್ಥಳೀಯ ಪಿಡಿಒ ಮತ್ತು ಶಾಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಮತ್ತು ಹೋಗುವುದಿಲ್ಲವೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳದಲ್ಲಿ ಹಾಜರಿದ್ದ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕರಾದ ಸಂತೋಷ್ ಅವರಿಗೆ ಸೂಚನೆ ನೀಡಿದ ತಹಶೀಲ್ದಾರ್ ಶಬರಿ ಪಿ ಡಿಓ ಅನ್ನು ಬೇರೆ ಕಡೆಗೆ ನಿಯೋಜನೆ ಮಾಡಿ ಗೌರಸಮುದ್ರ ಪಿಡಿಒ ರವರಿಗೆ ದೇವರೆಡ್ಡಿ ಹಳ್ಳಿ ಪಂಚಾಯಿತಿಯ ಪ್ರಭಾರವನ್ನು ವಹಿಸಿ ಸಾರ್ವಜನಿಕ ಜನಜೀವನಕ್ಕೆ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಸೂಚಿಸಿದರು.
ಹಾಗೆಯೇ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ಹಳ್ಳಿಗಳನ್ನು ಮುಂದಿನ 15 ದಿನಗಳ ಒಳಗಾಗಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿ ಈ ಗ್ರಾಮಗಳಲ್ಲಿ ಪೌತಿಖಾತೆ, ಪಿಂಚಣಿ, ಪೋಡಿ, ನಿವೇಶನ ರೈತರಿಗೆ ಜಮೀನು, ದಾರಿ ವಿವಾದ, ಮತ್ತಿತರರ ಕಂದಾಯ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಮಾನ್ಯ ಸಾರಿಗೆ ಸಚಿವರಿಂದ ಲೋಕಾರ್ಪಣೆ ಗೊಳಿಸುವುದಾಗಿ ಸೂಚಿಸಿದರು.
ಹಾಗೆಯೇ ನಾಳೆ ಮಕ್ಕಳನ್ನು ಮರಳಿ ಬಾ ಶಾಲೆಗೆ ಪರಿಕಲ್ಪನೆ ಅಡಿಯಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ಪೋಷಕರು ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಕಲಾ ತಂಡದೊಂದಿಗೆ ಮತ್ತು ಎತ್ತಿನಗಾಡಿಯೊಂದಿಗೆ ಮಕ್ಕಳನ್ನು ಶಾಲೆಗೆ ಕರೆತಂದು ಪ್ರೋತ್ಸಾಹಿಸುವ ಸಲುವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕ ಸಂತೋಷ್ ದೇವರೆಡ್ಡಿಹಳ್ಳಿ ಪಂಚಾಯಿತಿ ಅಧ್ಯಕ್ಷರು, ಲಕ್ಷ್ಮೀದೇವಮ್ಮ ಸದಸ್ಯರಾದ ಭೋಗನಹಳ್ಳಿ ಪ್ರಹ್ಲಾದ್ , ವೀರಪ್ಪ , ಶಾಂತಮ್ಮ ಅನುಸೂಯಮ್ಮ, ಮನೋಹರ, ಉಪಾಧ್ಯಕ್ಷರಾದ ರಾಜಮ್ಮ, ರಾಜಸ್ವನಿರೀಕ್ಷಕರ ರಫಿ, ಗ್ರಾಮ ಲೆಕ್ಕಾಧಿಕಾರಿಗಳದ ಉಮೇಶ್ ಉಪಸ್ಥಿತರಿದ್ದರು.