ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ರೈತರು ಮತ್ತು ಮಧ್ಯವರ್ತಿಗಳ ವಿಚಾರ ಆಗಾಗ ಸದ್ದು ಮಾಡುತ್ತಾ ಇರುತ್ತದೆ. ಈ ಮಧ್ಯವರ್ತಿಗಳಿಂದಾನೇ ಎಷ್ಟೋ ರೈತರಿಗೆ ನಷ್ಟವಾಗುತ್ತದೆ. ಇದೀಗ ಕೋಟೆನಾಡಿನಲ್ಲಿ ರೈತರಿಗೆ ಮುನ್ನೆಚ್ಚರಿಕೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
‘ಈ ಮೂಲಕ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ತಿಳಿಯಪಡಿಸುವುದೇನೆಂದರೆ, 2024 ನೇ ಸಾಲಿನ ಅಡಿಕೆ ಫಸಲು ಕೊಯ್ಲಿನ ಕಾಲ ಆರಂಭವಾಗಿದೆ. ಅಡಿಕೆ ಬೆಳೆಗಾರರು ತಮ್ಮ ತೋಟಗಳಲ್ಲಿಯೇ ಅಡಿಕೆಯನ್ನು ಮಾರಾಟ ಮಾಡುತ್ತಿರುತ್ತಾರೆ. ಅಂದರೆ ತೋಟವನ್ನು ಪೇಣಿಗೆ ನೀಡುವುದು, ಹಸಿ ಅಡಿಕೆಯನ್ನೇ ಮಾರುವುದು, ಇಲ್ಲವೇ ಒಣ ಅಡಿಕೆ ತಯಾರಿಸಿ ಮಾರುವುದು ಇತ್ಯಾದಿ. ಇದೇ ರೀತಿಯಾಗಿ ಕಳೆದ ವರ್ಷಗಳಲ್ಲಿ ನಡೆದ ವಹಿವಾಟಿನಲ್ಲಿ ರೈತರಿಗೆ ವ್ಯಾಪಾರಸ್ಥರು ಸರಿಯಾಗಿ ಹಣವನ್ನು ಬಟವಾಡೆ ಮಾಡದೇ ಸತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ತನಿಖೆ ಕೂಡ ನಡೆಯುತ್ತಿದೆ. ಹಲವು ರೈತರು ವಂಚನೆಗೆ ಒಳಗಾಗಿರುತ್ತಾರೆ.
ಕಳೆದ ಸಾಲಿನಲ್ಲಿ ಕೆಲವು ರೈತರಿಗೆ ಆಗಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಕೋರುವುದೇನೆಂದರೆ, ಈ ಮೇಲ್ಕಂಡಂತೆ ಅಡಿಕೆ ಮಾರಾಟದ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆದು ಮಾರಾಟ ಮಾಡುವುದು ಸರ್ವತಾ ಉತ್ತಮ, ರೈತರು ಬರೀ ನಂಬಿಕೆಗಳ ಮೇಲೆ ಇಲ್ಲವೇ ಚೀಟಿಗಳ ಮೇಲೆ ಬರೆದುಕೊಂಡು ವ್ಯವಹಾರ ನಡೆಸುತ್ತಿದ್ದು, ಈ ರೀತಿಯ ವಹಿವಾಟಿನಲ್ಲಿ ವ್ಯಾಪಾರಸ್ಥರು ರೈತರಿಗೆ ಹಣ ನೀಡದಿದ್ದಾಗ, ಕಾನೂನಿನ ಮೂಲಕ ರೈತರು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತರು ತಮ್ಮ ಅಡಿಕೆ ಮಾರುವ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ವ್ಯಾಪಾರಸ್ಥರು ಅಥವಾ ಖೇಣಿದಾರರಿಂದ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದಿರುವ Negotiable instrument ಗಳಾದ ಚೆಕ್ ಅಥವಾ ಪ್ರಾಮಿಸರಿ ನೋಟ್ ಅಥವಾ Bill of Exchange ನಂತಹ ಸೂಕ್ತ ಭದ್ರತೆ ಪಡೆದುಕೊಂಡು ವಂಚನೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ತಮ್ಮ ಬೆಳೆಯನ್ನು ಮಾರಾಟ ಮಾಡಲು ಕೋರಿದೆ’ ಎಂದು ಪ್ರಕಟಣೆಯ ಮೂಲಕ ಎಸ್. ಪಿ. ರಂಜಿತ್ ಕುಮಾರ್ ಬಂಡಾರು ಮನವಿ ಮಾಡಿದ್ದಾರೆ.