ರಾಯಚೂರು: ಇಂದಿನ ಸಚಿವರ ಫೈನಲ್ ಪಟ್ಟಿಯಲ್ಲಿ ಬೋಸರಾಜ್ ಅವರ ಹೆಸರು ಕೂಡ ಇದೆ. ಆದರೆ ಈ ಹೆಸರು ಸಚಿವ ಸ್ಥಾನದಲ್ಲಿ ಬಂದಿದ್ದೇ ತಡ ಹಲವರ ಕಣ್ಣು ಕೆಂಪಾಗಿದೆ. ಯಾಕಂದ್ರೆ ಈ ಬಾರಿಯ ಚುನಾವಣೆಯಲ್ಲೂ ಅವರು ಸ್ಪರ್ಧಿಸಿಲ್ಲ. ಹೀಗಾಗಿ ಶಾಸಕರು ಅಲ್ಲ, ಎಂಎಲ್ಸಿಯೂ ಅಲ್ಲ. ಆದರೂ ಅಚಿವ ಸ್ಥಾನ ಸಿಕ್ಕಿದೆ ಎಂಬುದೇ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಬೋಸರಾಜ್ ಅವರಿಗೆ ಸಚಿವ ಸ್ಥಾನ ಸಿಗುವುದಕ್ಕೆ ಹೈಕಮಾಂಡ್ ಕಾರಣ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ರಾಯಚೂರು ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು ಬೋಸರಾಜ್. ತನಗೆ ಅಥವಾ ತನ್ನ ಮಗ ರವಿ ಬೋಸರಾಜ್ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಹಾಕಿದ್ದರು. ಆದರೆ ಟಿಕೆಟ್ ಬೇರೆಯವರಿಗೆ ಕೊಡುವ ಪ್ಲ್ಯಾನ್ ನಡೆದಿತ್ತು. ಕ್ಷೇತ್ರ ಬಿಟ್ಟುಕೊಡಲು ಬೋಸರಾಜ್ ಗೆ ಯಾವುದೇ ರೀತಿಯ ಒಪ್ಪಿಗೆ ನೀಡಿರಲಿಲ್ಲ. ಕಾಂಗ್ರೆಸ್ ನಾಯಕರೆಲ್ಲಾ ಸಂಧಾನ ಮಾಡುವುದಕ್ಕೆ ಪ್ರುತ್ನ ಮಾಡಿದರು. ಅದು ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾಧಾನ ಮಾಡುವುದಕ್ಕೆ ಕೂಡ ಪ್ರಯತ್ನ ಪಟ್ಟಿದ್ದರು.
ಬಳಿಕ ಹೈಕಮಾಂಡ್ ನಾಯಕರೇ ನೇರವಾಗಿ ಬೋಸರಾಜ್ ಗೆ ಭರವಸೆಯನ್ನು ನೀಡಿದ್ದರು. ಸರ್ಕಾರ ರಚನೆಯಾದರೆ ಎಂಎಲ್ಸಿ ಮಾಡಿ, ಪ್ರಮುಖ ಹುದ್ದೆ ನೀಡುವುದಾಗಿ ತಿಳಿಸಿತ್ತು. ಇದೀಗ ಹೈಕಮಾಂಡ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆದರೆ ಬಿಕೆ ಹರಿಪ್ರಸಾದ್ ಅವರಿಗೆ ಸಿಗಬೇಕಾದ ಸಚಿವ ಸ್ಥಾನ ಕೈ ತಪ್ಪಿ ಬೋಸರಾಜ್ ಗೆ ಸಿಕ್ಕಿದ್ದಕ್ಕೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ.
ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಸೇರಿದಂತೆ ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಬೇಸರ ಹೊರ ಹಾಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.