ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿವೆ. ಇದರ ನಡುವೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಡೆಂಗ್ಯೂಗೆ ಸರಿಯಾದ ಚಿಕಿತ್ಸೆಯನ್ನು ಇನ್ನು ಕಂಡು ಹಿಡಿಯುವುದಕ್ಕೆ ಆಗಿಲ್ಲ. ಹೀಗಾಗಿ ಜನರೇ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಸಂಬಂಧ ಸಂಸದ ಡಾ.ಮಂಜುನಾಥ್ ಅವರು ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ.
ಡೆಂಗ್ಯೂ ರಾಜ್ಯಾದ್ಯಂತ ಹರಡುತ್ತಿದೆ. ಕೋವಿಡ್ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಡೆಂಗ್ಯೂ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಗ್ಯೂ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಇಲ್ಲಿ ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯವಾಗುತ್ತದೆ. ಡೆಂಗ್ಯೂ ಜ್ಚರ ನಿಯಂತ್ರಣವಾಗದೆ ಇದ್ದರೆ, ಮಾರಕ ಕಾಯಿಲೆಗಳಾದ ಚಿಕನ್ ಗೂನ್ಯಾ, ಝೀಕಾ ವೈರಸ್ ಕೂಡ ಕಾಣಿಸಿಕೊಳ್ಳುತ್ತದೆ. ಸರ್ಕಾರ ವೈದ್ಯಕೀಯ ತುರ್ತು ಚಿಕಿತ್ಸೆ ಘೋಷಿಸಬೇಕು ಎಂದಿದ್ದಾರೆ.
ಸರ್ಕಾರ ನಿಗಧಿ ಮಾಡಿದ ಹಣಕ್ಕಿಂತ ಹೆಚ್ಚಿನ ದರ ಪಡೆದರೆ ಅಂಥಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಂತಹ ಲ್ಯಾಬೋರೇಟರಿಗಳನ್ನು ಮುಚ್ಚಬೇಕು. ರಸ್ತೆಗಳು ಅಗೆದಿರುವುದು, ಗುಂಡಿ ಬಿದ್ದಿರುವುದನ್ನು ಸಕಾಲದಲ್ಲಿ ಮುಚ್ಚುತ್ತಿಲ್ಲ. ಹೀಗಾಗಿ ನೀರು ನಿಂತು ಡೆಂಗ್ಯೂ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖರ, ನಗರಾಭಿವೃದ್ಧಿ ಇಲಾಖೆ, ಪಂಚಾಯತಿಗಳು, ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕೂಡ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರ ಮುಂದೆ ಬರಬೇಕು. ಮಳೆಗಾಲದ ಸಮಸ್ಯೆಗಳಿಗೆ ಚಳಿಗಾಲದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಶಾಲಾ ಕಾಲೇಜುಗಳಿಗೂ ಆದೇಶ ಪ್ರತಿ ಕಳುಹಿಸಿ, ಮುಂಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದಿದ್ದಾರೆ.