ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಪಕ್ಷದಲ್ಲಿ ಶಿಸ್ತು ಕಾಪಾಡಲು ಯಾವ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಇನ್ನೂ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಭಾಷಣೆಗೂ ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ.
ಅವರು ಮಾತನಾಡಿಲ್ಲ ಎಂದು ನಾನು ಹೇಳಲು ಹೋಗುವುದಿಲ್ಲ. ನೀವು ತೋರಿಸಿರುವುದು ನಿಜ. ಆದರೆ ಅದು ಇಬ್ಬರ ನಡುವಣ ಆಂತರಿಕ ಮಾತುಕತೆ. ಅಧಿಕೃತ ಹೇಳಿಕೆ ಅಲ್ಲ. ಈ ಬಗ್ಗೆ ಉಗ್ರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಮಾಧ್ಯಮಗಳ ತಪ್ಪು ಎಂದು ಯಾಕೆ ಹೇಳಲಿ? ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅದೇ ರೀತಿ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿರುವುದದ್ದನ್ನೂ ತೋರಿಸಿದ್ದೀರಿ. ಅದೇ ರೀತಿ ಈಗ ತೋರಿಸಿದ್ದೀರಿ. ಆದರೆ ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬುದು ನನ್ನ ಸ್ಪಷ್ಟವಾದ ಮಾತು ಎಂದರು.
ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಕಲ್ಲು ಎಸೆಯುವವರು, ಮೊಟ್ಟೆ ಹೊಡೆಯುವವರು, ಧಿಕ್ಕಾರ ಕೂಗುವವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ.