ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಬೆಳೆಗಳು ನೆಲಕಚ್ಚಿವೆ. ಇನ್ನೇನು ಕೈಗೆ ಸಿಗುತ್ತವೆ ಎಂಬ ಬೆಳೆಯೂ ಹಾಳಾಗುತ್ತಿದೆ. ಅದರಲ್ಲಿ ಈರುಳ್ಳಿ ಬೆಲೆಯೂ ಒಂದು. ಕಟಾವಿನ ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆ ಕೊಳೆಯುವುದಕ್ಕೆ ಶುರುವಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಕೊಂಡುಕೊಳ್ಳಲು ಹೋದವನಿಗೆ ಶಾಕ್ ನೀಡುತ್ತಿದೆ. ಹಾಗಂತ ರೈತರಿಗೂ ಲಾಭದಾಯಕವೆನಿಸುವ ಸ್ಥಿತಿ ಏನು ಇಲ್ಲ. ಬದಲಿಗೆ ಫಸಲು ಕೈಗೆ ಸಿಗದೆ ಕಂಗಲಾಗಿದ್ದಾರೆ.
ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವನ್ನು ಕಂಡಿದ್ದ ರೈತ, ಒಳ್ಳೆ ಲಾಭ ಮಾಡಬಹುದು ಎಂದುಕೊಂಡಿದ್ದ ಆದರೆ ಬೆಳೆಯೇ ಕೊಳೆಯುತ್ತಿದ್ದು, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾನೆ. ಬೆಂಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಇಂಥ ಪರಿಸ್ಥಿತಿ ಬಂದೊದಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೆಲವೆಡೆ ಈರುಳ್ಳಿಯನ್ನು ಬೆಳೆಯಲಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ನಷ್ಟು ಈರುಳ್ಳಿಯನ್ನು ಹಾಕಲಾಗಿದೆ. ಆದರೆ ಮಳೆಯ ಪರಿಣಾಮ ನೂರು ಹೆಕ್ಟೇರ್ ನಷ್ಟು ಬೆಳೆ ಕೈಯಿಂದ ಜಾರಿದೆ.
ಹೀಗೆ ಬೆಳೆ ನಾಶವಾದ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿಗೆ ಈ ಮೊದಲು 40 ರೂಪಾತಿಗೆ ಮಾರಾಟವಾಗುತ್ತಿತ್ತು. ಈಗ ನೋಡಿದ್ರೆ 5 ಕೆಜಿ ಈರುಳ್ಳಿ ಬೆಲೆ ಬೆಂಗಳೂರಿನಲ್ಲಿ 400 ರೂಪಾಯಿ ಇದೆ. ಇದನ್ನು ಕಂಡು ಕೆಜಿ ತಗೋಬೇಕಾ, ಐದು ಕೆಜಿ ತಗೋಬೇಕಾ ಎಂಬ ಗೊಂದಲ ಗ್ರಾಹಕರದ್ದಾಗಿದೆ. ಆದರೂ ಕೆಜಿ 70-80 ರೂಪಾಯಿ ಬೀಳಲಿದೆ. ಹೀಗೆ ನಿರಂತರವಾಗಿ ಮಳೆ ಸುರಿದರೆ ಈರುಳ್ಳಿ ಬೆಲೆಯಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ. ರೈತರ ಕೈಗೆ ಫಸಲು ಬಂದರೆ ಲಾಭವಾದರೂ ಆಗುತ್ತೆ. ಇಂದಿನ ವಾತಾವರಣದಿಂದ ರೈತರಿಗೂ ಸುಖವಿಲ್ಲ, ಗ್ರಾಹಕರಿಗೂ ಲಾಭವಿಲ್ಲ ಎಂಬಂತಾಗಿದೆ.