ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯ ಮುಂದುವರೆದ ಭಾಗವಾಗಿ ಸಂವಿಧಾನ ಬಚಾವ್ ಹತ್ತು ಕಿ.ಮೀ. ಪಾದಯಾತ್ರೆ ನ.28 ರಂದು ಚಿತ್ರದುರ್ಗದಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಧರ್ಮಸೇನ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ವಿವಿಧ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಸಂವಿಧಾನ ಬಚಾವ್ ಪಾದಯಾತ್ರೆ ನಡೆಸಲು ಬಾರತ್ ಜೋಡೋ ಐಕ್ಯತಾ ಪಾದಯಾತ್ರೆಯಲ್ಲಿಯೇ ತೀರ್ಮಾನಿಸಲಾಯಿತು. ಪ್ರತಿ ಜಿಲ್ಲೆಯಲ್ಲಿ ಹತ್ತು ಕಿ.ಮೀ.ನಷ್ಟು ಸಂವಿಧಾನ ಬಚಾವ್ ಪಾದಯಾತ್ರೆ ನಡೆಸಲು ಎ.ಐ.ಸಿ.ಸಿ.ಹಾಗೂ ಕೆ.ಪಿ.ಸಿ.ಸಿ.ಸೂಚಿಸಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ 28 ರಂದು ಬೆಳಿಗ್ಗೆ 9 ಗಂಟೆಗೆ ಚಿತ್ರದುರ್ಗದಲ್ಲಿ ಯಾತ್ರೆ ಉದ್ಘಾಟಿಸಲಿದ್ದಾರೆ. ಅದಕ್ಕಾಗಿ ಚಿಕ್ಕ ಚಿಕ್ಕ ಸಭೆಗಳನ್ನು ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರುವ ಕೆಲಸ ಮಾಡಬೇಕೆಂದು ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಲ್ಲಿ ಮನವಿ ಮಾಡಿದರು.
ಯಾವ ಕಾರಣಕ್ಕೆ ಪಕ್ಷಕ್ಕೆ ಹಿನ್ನೆಡೆಯಾಯಿತು ಎನ್ನುವುದು ವರಿಷ್ಠರಿಗೆ ಗೊತ್ತಾಗಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕಾಂಗ್ರೆಸ್ ಯೋಜನೆಗಳನ್ನು ಬಿಜೆಪಿ.ನಮ್ಮದೆಂದು ಹೇಳಿಕೊಂಡು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತ ಅಭಿವೃದ್ದಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ. ನಿಮ್ಮ ನಿಮ್ಮ ಒಳಿತಿಗಾಗಿ ಸಂವಿಧಾನ ಬಚಾವ್ ಪಾದಯಾತ್ರೆ ಮಾಡಲಾಗುವುದು. ದೇಶ ಒಡೆಯುವವರು ಬಿಜೆಪಿ.ಯವರೆ ವಿನಃ ಕಾಂಗ್ರೆಸ್‍ನವರಲ್ಲ. ಮುಸ್ಲಿಂ-ದಲಿತರನ್ನು ಒಟ್ಟಾಗಿ ಇರಲು ಬಿಡುತ್ತಿಲ್ಲ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಪಕ್ಷ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಇದು ನಮ್ಮ ಹಾಗೂ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಎಲ್ಲರನ್ನು ಪಕ್ಷಕ್ಕೆ ಸೇರಿಸುವ ಕೆಲಸವಾಗಬೇಕಿದೆ ಎಂದರು.
ಮಾಜಿ ಸಚಿವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹೆಚ್.ಆಂಜನೇಯ ಮಾತನಾಡಿ ನಮ್ಮ ಪಕ್ಷದ ಕೆಲವು ಶಾಸಕರುಗಳನ್ನು ಖರೀಧಿಸಿ ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ. ಸಂವಿಧಾನ ವಿರೋಧಿ ಕೆಲಸ ಮಾಡಿಕೊಂಡು ಬರುತ್ತಿದೆ. ಪ್ರಧಾನಿ ಮೋದಿಯ ಸರ್ವಾಧಿಕಾರಿ ಆಡಳಿತಕ್ಕೆ ದೇಶದ ಜನ ಬೇಸತ್ತಿದ್ದಾರೆ.
ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿಯನ್ನು ಹೇರಿ ಶಾಂತಿಗೆ ಭಂಗ ಉಂಟು ಮಾಡುವವರನ್ನು ಜೈಲಿಗೆ ಹಾಕಿದರು. ಬಿಜೆಪಿ.ದುರಾಡಳಿತ ವಿರುದ್ದ ಜನರನ್ನು ಜಾಗೃತಿಗೊಳಿಸಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕು. ಅದಕ್ಕಾಗಿಯೇ ರಾಹುಲ್‍ಗಾಂಧಿ ಭಾರತ್ ಜೋಡೋ ಐಕ್ಯತಾ ಯಾತ್ರೆಯಲ್ಲಿ 3600 ಕಿ.ಮೀ.ಪಾದಯಾತ್ರೆ ಕೈಗೊಂಡಿದ್ದಾರೆ. ಪಕ್ಷದಲ್ಲಿ ಆಸಕ್ತಿಯುಳ್ಳ ಕಾರ್ಯಕರ್ತರು ಬೆಳೆಯಿರಿ. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಬಿಜೆಪಿ.ಒಡೆದಾಳುವ ನೀತಿ ಅನುಸರಿಸುತ್ತಿದ್ದರೆ ಕಾಂಗ್ರೆಸ್ ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಇದೆ ಬಿಜೆಪಿ.ಮತ್ತು ಕಾಂಗ್ರೆಸ್‍ಗಿರುವ ವ್ಯತ್ಯಾಸ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ಬಹುಸಂಖ್ಯಾತರ ಹಕ್ಕುಗಳನ್ನು ಬಿಜೆಪಿ.ಸರ್ಕಾರ ಕಸಿದುಕೊಳ್ಳುತ್ತಿದೆ. ಎ.ಐ.ಸಿ.ಸಿ.ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆರವರು ಮಾಹಿತಿ ಹಕ್ಕು ಆಧಾರದ ಮೇಲೆ ಕೇಳಿರುವುದನ್ನು ಗಮನಿಸಿದರೆ ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡುವ ಗೋಜಿಗೆ ಬಿಜೆಪಿ. ಮನಸ್ಸು ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಏಕೆಂದರೆ ಖಾಲಿ ಹುದ್ದೆಗಳನ್ನು ತುಂಬಿದರೆ 22 ಲಕ್ಷದಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ನೀಡಬೇಕು. ಅದು ಕೋಮುವಾದಿ ಬಿಜೆಪಿ.ಗೆ ಇಷ್ಟವಿಲ್ಲ. ಸಂವಿಧಾನದಲ್ಲಿರುವ ಸೌಲತ್ತುಗಳನ್ನು ಕೊಡದಿರುವ ಸಂಚು ನಡೆಸುತ್ತಿದೆ ಎಂದು ಕಿಡಿ ಕಾರಿದರು.
ಬಿಜೆಪಿ.ಯ ದುರಾಡಳಿತನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತಿಳಿಸಬೇಕು. ಅದಕ್ಕಾಗಿ ಭಾರತ್ ಜೋಡೋ ಸಂವಿಧಾನ್ ಬಚಾವೋ ಪಾದಯಾತ್ರೆ ನಡೆಸಲು ಎ.ಐ.ಸಿ.ಸಿ. ಕೆ.ಪಿ.ಸಿ.ಸಿ ಅವಕಾಶ ನೀಡಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಭಾರತ್ ಜೋಡೋ ಪಾದಯಾತ್ರೆಯ ಮಾದರಿಯಲ್ಲೇ ಸಂವಿಧಾನ ಬಚಾವ್ ಪಾದಯಾತ್ರೆ ನಡೆಸುವಂತೆ ಎ.ಐ.ಸಿ.ಸಿ.ಸೂಚಿಸಿದೆ. ಅದರಂತೆ 28 ರಂದು ಚಿತ್ರದುರ್ಗದಲ್ಲಿ ಸಂವಿಧಾನ ಬಚಾವ್ ಪಾದಯಾತ್ರೆ ಹೊರಡಲಿದ್ದು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಎಲ್ಲಾ ಜಾತಿ ವರ್ಗದವರನ್ನು ಸಂವಿಧಾನ ಬಚಾವ್ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವೊಲಿಸಿ ಕರೆತರುವ ಜವಾಬ್ದಾರಿ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲಿದೆ. ಪಕ್ಷ ಸಂಘಟನೆಗೆ ಇದು ಪೂರಕವಾಗಿರುವುದರಿಂದ ಹತ್ತು ಕಿ.ಮೀ.ಪಾದಯಾತ್ರೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷ ಪಾಲಯ್ಯ, ವೀಕ್ಷಕ ತಿಮ್ಮಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ, ಪರಿಶಿಷ್ಟ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಚೋಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಕೆ.ರಾಬರ್ಟ್, ನ್ಯಾಯವಾದಿಗಳಾದ ಸುದರ್ಶನ್, ರವೀಂದ್ರ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.