Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತುರುವನೂರು ರಸ್ತೆಯಲ್ಲಿ ಡಿವೈಡರ್ ತೆರವು, ಚಳ್ಳಕೆರೆ ಗೇಟ್ ನಲ್ಲಿ ಹೊಸ ಸಂಚಾರಿ ವೃತ್ತ ನಿರ್ಮಾಣ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

Facebook
Twitter
Telegram
WhatsApp

ಚಿತ್ರದುರ್ಗ. ಜು. 03:   ನಗರದ ಸಂಚಾರ ದಟ್ಟಣೆ ಹಾಗೂ ಸಮಸ್ಯೆ ಕುರಿತು ಸಂಚಾರ ಠಾಣೆ ಪೊಲೀಸರು ಸಮೀಕ್ಷೆ ನಡೆಸಿ,  ಪರಿಹಾರಕ್ಕಾಗಿ ಸೂಕ್ತ ವರದಿ ಸಿದ್ಧಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ಅನುಷ್ಠಾನ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಮುಖ್ಯ ರಸ್ತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಓಡಾಟದಿಂದ ಎಸ್.ಬಿ.ಐ ಬ್ಯಾಂಕ್ ಹಾಗೂ ಎಂ.ಜಿ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಸುಗಮ ಸಂಚಾರಕ್ಕೆ ಅನುಕೂಲವಾಗುಂತೆ ನಗರ ಪ್ರವೇಶಿಸುವ ಹಾಗೂ ಹೊರ ಹೋಗುವ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸಂಚಾರ ಮಾರ್ಗಗಳಲ್ಲಿ ಮಾಡಬೇಕಾದ ಬದಲಾವಣೆ, ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಸೂಕ್ತ  ಪಾರ್ಕಿಂಗ್ ಸ್ಥಳ ಗುರುತಿಸಿ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹೊಸ ಸಂಚಾರಿ ವೃತ್ತ ನಿರ್ಮಾಣ:
ಚಳ್ಳಕೆರೆ ಗೇಟ್‍ನಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಸಂಚಾರಿ ವೃತ್ತ ನಿಮಾರ್ಣ ಮಾಡುವ ಕುರಿತು ಲೊಕೋಪಯೋಗಿ ಹಾಗೂ ನಗರಸಭೆಯಿಂದ ಪರಿಶೀಲನೆ ನಡೆಸಬೇಕು. ರಸ್ತೆ ಸೇತುವೆ ಕೆಳಭಾಗದ ಹಾಗೂ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಸೇತುವೆ ಕೆಳಭಾಗದಲ್ಲಿ ಪಾರ್ಕಿಂಗ್‍ಗೆ ಅವಕಾಶ ನೀಡದಂತೆ, ರಸ್ತೆಯ ಇಕ್ಕೆಲಗಳಲ್ಲಿರುವ ಖಾಲಿ ಸ್ಥಳದಲ್ಲಿ ದ್ವಿ ಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಹಾಗೂ ಚಳ್ಳಕೆರೆ ಗೇಟ್ ಬಳಿ ಬಸ್ ತಂಗುದಾಣ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪಘಾತ ತಡೆಗೆ ಮೆಸ್ ಅಳವಡಿಕೆ :
ನಗರದ ಕೆಳಗೋಟೆಯ ಬಸವೇಶ್ವರ ಆಸ್ಪತ್ರೆಯ ಬಳಿಯ ಹಳೆಯ ರಾಷ್ಟ್ರೀಯ ಹೆದ್ದಾರಿ ಅಪಾಯಕರ ಸ್ಥಳವಾಗಿದೆ. ಜನರು ರಸ್ತೆ ದಾಟಲು ಹೋಗಿ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಈ ಸ್ಥಳದಲ್ಲಿ 2020 ರಿಂದ 2024ರ ವರೆಗೆ ವಿವಿಧ ಅಪಘಾತದಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಜನರು ಹೆದ್ದಾರಿ ಪ್ರವೇಶಿಸದಂತೆ ಲೋಹದ ಮೆಸ್ ಅಳವಡಿಸಬೇಕು. ಹೀಗೆ ಅಳವಡಿಸಿದ ಮೆಸ್ ತುಂಡಾಗದಂತೆ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸಭೆಯಲ್ಲಿ ಹೇಳಿದರು.

ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ. ತಕ್ಷಣವೇ ಹೆದ್ದಾರಿ ಮಧ್ಯದ ಡಿವೈಡರ್‍ಗಳಲ್ಲಿ ಬೆಳೆದಿರುವ ಗಿಡಗಳನ್ನು ಕಡಿಯುವ ಕೆಲಸವಾಗಬೇಕು.  ಸಂಚಾರಿ ಫಲಕಗಳು ಅಳವಡಿಸಬೇಕು. ಅಪಘಾತ ಕೇವಲ ಒಬ್ಬ ವ್ಯಕ್ತಿ ಸಂಬಂಧ ಪಟ್ಟದ್ದು ಅಲ್ಲ. ಅವರನ್ನು ನಂಬಿದ ಕುಟುಂಬಗಳು ಅಪಘಾತದಲ್ಲಿ ಬೀದಿಪಾಲಾಗುತ್ತಿವೆ. ಆದ್ದರಿಂದ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಹೇಳಿದರು.

ತುರುವನೂರು ರಸ್ತೆಯಿಂದ ಜಿಲ್ಲಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಜಿಲ್ಲಾ ಆಸ್ಪತ್ರೆ ಮುಂಭಾಗ ಬಿ.ಡಿ. ರಸ್ತೆಯಲ್ಲಿನ ಡಿವೈಡರ್ ತೆರವುಗೊಳಿಸಿ ಆಸ್ಪತ್ರೆಗೆ ಹೋಗಲು ಅನುಕೂಲ ಮಾಡಿಕೊಡಬೇಕು. ಮೆದೆಹಳ್ಳಿ ಅಂಡರ್ ಪಾಸ್ ಬಳಿ ರಸ್ತೆಯ ಮಧ್ಯದಲ್ಲಿ ಒಳಚರಂಡಿ ದುರಸ್ಥಿಯಲ್ಲಿ ಇದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಮಾದರಿಯಲ್ಲಿ ತುರುವನೂರು ರಸ್ತೆಯ ಅಂಡರ್ ಪಾಸ್ ತೊಂದರೆ ಇದೆ. ನಗರ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಚಾರ ಅಧಿಕವಾಗಿದೆ. ಗೂಡಂಗಡಿಗಳು ಸಹ ಹೆಚ್ಚಾಗಿವೆ ಇದರಿಂದ ಲಘು ಅಪಘಾತಗಳು ಉಂಟಾಗುವ ಸಂಭವವಿದೆ ಎಂದು ಸಂಚಾರಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಟಿ. ರಾಜು ಸಭೆಯಲ್ಲಿ ವಿವರಿಸಿದರು.

ಪಾರ್ಕಿಂಗ್ ಮಾರ್ಕಿಂಗ್ ಟೆಂಡರ್:
ನಗರದ ಪಾರ್ಕಿಂಗ್ ಸ್ಥಳಗಳಲ್ಲಿ ಮಾರ್ಕಿಂಗ್ ಮಾಡಲು ರೂ.14.63 ಲಕ್ಷಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ನಗರ ಸಭೆ ಆಯುಕ್ತೆ ಎಂ.ರೇಣುಕಾ ಸಭೆಯಲ್ಲಿ ಮಾಹಿತಿ ನೀಡಿದರು.

ಆಟೋ ನಿಲ್ದಾಣಗಳಿಗಾಗಿ ನಗರಸಭೆಯಿಂದ 27 ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಚರ್ಚಿಸಿ ಕ್ರಮ ವಹಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗಾಗಿ 12 ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ವ್ಯಾಪಾರ ಸ್ಥಳಗಳನ್ನು ಗುರುತಿಸಲಾಗುವುದು ಎಂದರು.

20 ವರ್ಷ ಪೂರೈಸಿದ ವಾಹನಗಳ ನೊಂದಣಿ ರದ್ದು :
ಕಡ್ಲೆಗುದ್ದು ಹಾಗೂ ಸಾಸಲು ರಸ್ತೆಗಳಲ್ಲಿ ಅದಿರು ತುಂಬಿರುವ  ಬೃಹತ್ ವಾಹನಗಳು ಸಂಚಾರ ಮಾಡುತ್ತಿವೆ. ಈ ವಾಹನಗಳಿಂದ ರಸ್ತೆ ಹಾಳಾಗುವುದರ ಜೊತೆ ಪರಿಸರ ಮಾಲಿನ್ಯವು ಉಂಟಾಗುತ್ತಿದೆ. ಈ ವಾಹನಗಳ ಪೈಕಿ 20 ವರ್ಷ ಪೂರೈಸಿದ ವಾಹನಗಳ ನೊಂದಣಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರದ್ದು ಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಹಳೆಯ ಗೂಡ್ಸ್ ವಾಹನ, ಟ್ಯಾಕ್ಟರ್, ಟ್ರ್ಯಾಲಿ, ಲಾರಿ, ಟಿಪ್ಪರ್‍ಗಳ ಹಿಂಬದಿಯಲ್ಲಿ ರಿಫ್ಲೆಕ್ಟರ್‍ಗಳು ಇಲ್ಲದೇ ಇರುವುದು ಕಂಡುಬರುತ್ತದೆ. ಇದರಿಂದ ಸಾಕಷ್ಟು ಅಫಘಾತ ಹಾಗೂ ಸಾವು ನೋವು ಸಂಭವಿಸುತ್ತಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲೆಕ್ಟರ್‍ಗಳ ಅಳವಡಿಕೆಗೆ ವಿಶೇಷ ಅಭಿಯಾನ ನಡೆಸಬೇಕು. ತಪಾಸಣೆ ನಡೆಸಿ ವಾಹನ ಮಾಲಿಕರಿಂದ ಹಣ ಪಡೆದು ರಿಫ್ಲೆಕ್ಟರ್‍ಗಳನ್ನು ಅಳವಡಿಸಬೇಕು. ಗ್ರಾಮೀಣ ಭಾಗದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡುಬರುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 33,000 ಎಲ್.ಎಂ.ವಿಗಳು ನೊಂದಣಿಯಾಗಿವೆ. ಇದರಲ್ಲಿ ಬಹುತೇಕ ಟ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳು ಆಗಿವೆ. ಸಾರಿಗೆ ಇಲಾಖೆಯಿಂದ ರಿಫ್ಲಕ್ಟರ್ ಅಡಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 247 ಅದಿರು ಸಾಗಣೆ ಮಾಡುವ ಲಾರಿಗಳು ಇವೆ. ಇವುಗಳಲ್ಲಿ ನೊಂದಣಿ ಅವಧಿ ಮುಕ್ತಾಯಗೊಂಡ ಹಾಗೂ ಸಕ್ಷಮವಾಗಿ ಇರುವ ಲಾರಿಗಳ ನೊಂದಣಿ ನವೀಕರಿಸದೇ, ರದ್ದು ಮಾಡುವುದಾಗಿ ಪ್ರಾದೇಶಿಕ ಸಾರಿಗೆ ಭರತ್.ಎಂ.ಕಾಳೆಸಿಂಗೆ ಹೇಳಿದರು.

ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕು. ಜಿಲ್ಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು. ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾಕಿರ್ಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಟ್ರಕ್ ಟರ್ಮಿನಲ್ ನಿಮಾರ್ಣಕ್ಕೆ ಪ್ರಸ್ತಾವನೆ ಸಲ್ಲಿಸಿ:
ಹಿರಿಯೂರು ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಇರುವುದರಿಂದ, ಹೆದ್ದಾರಿ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದಲೂ ಅಪಘಾತಗಳು ಸಂಭವಿಸುತ್ತಿವೆ.  ಹೀಗಾಗಿ ಇಲ್ಲಿನ ರಸ್ತೆ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸದಂತೆ ಮಾಡಲು ಹಿರಿಯೂರು  ಬಳಿ 20 ಎಕೆರೆ ವಿಸ್ತೀರ್ಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಹಿರಿಯೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ  ನಡೆಸಲಾಗುತ್ತಿರುವ ಎಲ್ಲಾ ಗೂಡಂಗಡಿ, ಹೋಟೆಲ್ ಹಾಗೂ ಡಾಬಾಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.

ಶಿಶು ಕವಚ ಹಾಗೂ ವಿಎಲ್‍ಟಿ ಪ್ಯಾನಿಕ್ ಬಟನ್ ಕಡ್ಡಾಯ:  ಸಾರಿಗೆ ಇಲಾಖೆಯಿಂದ ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರಿಯ ವೇಳೆ 9 ತಿಂಗಳ ಮೇಲ್ಪಟ್ಟ ಹಾಗೂ 4 ವರ್ಷದ ಮಕ್ಕಳಿಗೆ ಶಿಶು ಕವಚ ಕಡ್ಡಾಯಗೊಳಿಸಿದೆ. ಇಲ್ಲವಾದರೆ ರೂ.1000 ದಂಡ ವಿಧಿಸಲಾಗುವುದು. ಇದರ ಜೊತೆಗೆ 4 ಆಸನಗಳ ಮೇಲ್ಪಟ್ಟ ವಾಹನಗಳಲ್ಲಿ ವಿಎಲ್‍ಟಿ (ವೆಹಿಕಲ್ ಲೊಕೇಷನ್ ಟ್ರಾಕಿಂಗ್ ) ಮಹಿಳೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಪ್ಯಾನಿಕ್ ಬಟನ್ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹೆದ್ದಾರಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!