ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.29): ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಹೊಳಲ್ಕೆರೆ ತಾಲ್ಲೂಕಿನ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 370 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದು, ಪೈಪ್ಲೈನ್ ಕಾಮಗಾರಿ ಆರಂಭಗೊಂಡಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 81 ಲಕ್ಷ ರೂ.ವೆಚ್ಚದ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಗಟ್ಟಿಹೊಸಹಳ್ಳಿ ಬಳಿ ಗುಡ್ಡದ ಮೇಲೆ ಫಿಲ್ಟರ್ ಅಳವಡಿಸಲು ಎಪ್ಪತ್ತು ಕೋಟಿ ರೂ.ಗಳನ್ನು ನೀಡಿದ್ದೇನೆ. ಇದಲ್ಲದೆ ಪ್ರತಿ ಊರುಗಳಲ್ಲಿ ನೀರಿನ ಟ್ಯಾಂಕ್ ಕಟ್ಟಿಸುವುದಕ್ಕಾಗಿ 102 ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. 2051 ರ ಜನಗಣತಿಯನ್ನು ಗಮನದಲ್ಲಿಟ್ಟುಕೊಂಡು ನೀರು ಕೊಡಲಾಗುವುದು. ಹೊಳಲ್ಕೆರೆ ತಾಲ್ಲೂಕಿನ ಇಡಿ ಕ್ಷೇತ್ರದಲ್ಲಿ ಕೆರೆ ಕಟ್ಟೆ, ಚೆಕ್ಡ್ಯಾಂಗಳ ನಿರ್ಮಾಣ, ರಸ್ತೆ, ಕುಡಿಯುವ ನೀರು, ವಿದ್ಯುತ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿದ್ದೇನೆ. ಪಂಡರಹಳ್ಳಿ, ಮಧುರೆ, ಬೆಂಕಿಕೆರೆಯಿಂದ ದೊಡ್ಡ ಲೈನ್ ತಂದು ಮೂವತ್ತು ಮೆ.ವ್ಯಾ.ವಿದ್ಯುತ್ ಇದ್ದಿದ್ದನ್ನು ಎಪ್ಪತ್ತು ಮೆ.ವಾ.ಗೆ ಏರಿಸಿ ದಿನಕ್ಕೆ ಏಳು ಗಂಟೆ ವಿದ್ಯುತ್ನ್ನು ರೈತರಿಗೆ ಪೂರೈಸಲಾಗುವುದು. ಇದರಿಂದ ಇನ್ನು 25 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಪ್ರತಿನಿತ್ಯ ಬೆಳಿಗ್ಗೆ 6 ರಿಂದ ರಾತ್ರಿ ಹತ್ತು ಗಂಟೆಯತನಕ ಕ್ಷೇತ್ರದ ಜನರ ಬಳಿ ಇದ್ದುಕೊಂಡು ಕಷ್ಟ-ಸುಖ, ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ಹುಟ್ಟು-ಸಾವಿನ ನಡುವೆ ಜೀವನ ಸಾರ್ಥಕವಾಗಬೇಕಾದರೆ ಹತ್ತು ಜನ ಮೆಚ್ಚುವಂತ ಕೆಲಸ ಮಾಡಬೇಕೆಂಬುದು ನನ್ನ ಆಸೆ. ಈ ಹಿಂದೆ ಹೊಳಲ್ಕೆರೆ ಕ್ಷೇತ್ರದಿಂದ ಗೆದ್ದು ಸಚಿವರಾದವರು ಏನು ಮಾಡಿದ್ದಾರೆಂಬುದು ನಿಮಗೆಲ್ಲಾ ಗೊತ್ತು. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯೋಚಿಸಿ ಮತದಾನ ಮಾಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಟಿ.ರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ದೇವರಾಜ್, ಗ್ರಾಮದ ಮುಖಂಡರುಗಳಾದ ಬಿ.ಕರಿಯಪ್ಪ, ಚಂದ್ರಶೇಖರಪ್ಪ, ಶಂಭುಲಿಂಗಪ್ಪ, ನಂಜಪ್ಪ, ತಿಪ್ಪೇಶಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.