ಚಿತ್ರದುರ್ಗ: ಪೌರ ಕಾರ್ಮಿಕರು ವೃತ್ತಿ ಕೌಶಲ್ಯ ತರಬೇತಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ತಿಳಿಸಿದರು.
ನಗರಸಭೆ ವತಿಯಿಂದ ಅಮೃತ ನಿರ್ಮಲ ನಗರ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುರಕ್ಷತೆ ಮತ್ತು ಸಬಲೀಕರಣದ ಕುರಿತು ಪೌರ ಕಾರ್ಮಿಕರಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪೌರ ಕಾರ್ಮಿಕರು ನಿರಂತರವಾಗಿ ನಗರವನ್ನು ಸ್ವಚ್ಚವಾಗಿಡುವ ವೃತ್ತಿಯೊಂದನ್ನೆ ನಂಬಿ ಕೂರಬಾರದು. ಸರ್ಕಾರ ನಿಮಗಾಗಿ ಹಲವಾರು ವೃತ್ತಿ ಕೌಶಲ್ಯ ತರಬೇತಿಗಳನ್ನು ನೀಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಅನೇಕ ಸವಲತ್ತುಗಳಿವೆ. ಎಲ್ಲವನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಸಬಲೀಕರಣಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
1983 ರ ಕಾಯಿದೆ ಪ್ರಕಾರ ಮಲ ಮೂತ್ರವನ್ನು ಕೈಯಲ್ಲಿ ಎತ್ತಿ ಸ್ವಚ್ಚಗೊಳಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಪ್ರಜ್ಞೆ ನಿಮ್ಮಲ್ಲಿರಬೇಕು. ಯಾವುದೇ ಕಾರಣಕ್ಕೂ ಎಂತಹ ಒತ್ತಡ ಬಂದರು ಕೈಯಲ್ಲಿ ಮಾತ್ರ ಸ್ವಚ್ಚಗೊಳಿಸಬಾರದು. ದಿನವಿಡಿ ನಗರವನ್ನೆಲ್ಲಾ ಸ್ವಚ್ಚಗೊಳಿಸುವ ಪೌರ ಕಾರ್ಮಿಕರು ಆರೋಗ್ಯ ಸುರಕ್ಷತೆ ಕಡೆ ಸದಾ ಜಾಗರೂಕರಾಗಿರಬೇಕು. ನಿಮ್ಮ ಮಕ್ಕಳನ್ನು ಪೌರ ಕಾರ್ಮಿಕೆ ಕೆಲಸಕ್ಕೆ ನೂಕಬೇಡಿ. ಉನ್ನತ ಶಿಕ್ಷಣಕ್ಕೆ ಸರ್ಕಾರ ನೆರವು ನೀಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ವಿದ್ಯಾವಂತರಾಗುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವಂತೆ ತಿಳಿಸಿದರು.
ಮದ್ಯಪಾನ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ನಾಗರೀಕರನ್ನಾಗಿ ಮಾಡುವ ಮೂಲಕ ವೃತ್ತಿಯಲ್ಲಿ ಬದಲಾವಣೆ ಕಂಡುಕೊಳ್ಳಿ ಎಂದು ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಮಂಜುಳ ವೇದಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪೌರಾಯುಕ್ತರಾದ ಹನುಮಂತರಾಜು, ಪರಿಸರ ಇಂಜಿನಿಯರ್ ಜೆ.ಜಾಫರ್, ಆರೋಗ್ಯ ನಿರೀಕ್ಷಕರುಗಳಾದ ಬಾಬುರೆಡ್ಡಿ, ಸರಳ, ಭಾರತಿ, ನಿರ್ಮಲ, ನಾಗರಾಜ್, ಬಸವರಾಜ್ ತರಬೇತಿ ಕಾರ್ಯಾಗಾರದಲ್ಲಿ ಹಾಜರಿದ್ದರು.