ಚಿತ್ರದುರ್ಗ : ರಾಜ್ಯ ಸರಕಾರಿ ನೌಕರರ ಸಂಘದ ವಿರುದ್ಧ ಅಪಪ್ರಚಾರ ಮತ್ತು ತೇಜೋವಧೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ನೌಕರರ ಪರವಾಗಿ ಹಲವಾರು ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರಾಷ್ಟ್ರದಲ್ಲಿಯೇ ಮಾದರಿಯಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನೆಯನ್ನು ದುರ್ಬಲಗೊಳಿಸುವ ಉದ್ದೇಶದ ಹುನ್ನಾರ ನಡೆಸಿರುವ ಸಂಘಟನೆಯ ವಿರೋಧಿಗಳಾದ ಸರ್ಕಾರಿ ನೌಕರರಾದ ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು (ವಾಣಿಜ್ಯ ಮತ್ತು ಸಕ್ಕರೆ ಕೈಗಾರಿಕೆ ಇಲಾಖೆ) ಇದರ ಅಧೀನ ಕಾರ್ಯದರ್ಶಿ ಶಾಂತಾರಾಮ, ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು ಇದರ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರು ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಮೆಹಬೂಬ ಭಾಷಾ ಎಂ. ಭೂಮಾಪನ ಇಲಾಖೆ ಬೆಂಗಳೂರು ಇದರ ಸೂಪರವೈಸರ್ ಶಿವರುದ್ರಯ್ಯ ವಿ.ವಿ, ರಾಮನಗರ ತಾಲ್ಲೂಕು ಅವ್ವೇರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಂಗೇಗೌಡ್ರು ಈ ಐದು ಜನರು ಸೇರಿ ರಾಜ್ಯ, ಜಿಲ್ಲಾ , ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳ ಹಾಗೂ ರಾಜ್ಯ, ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದು ಅಲ್ಲದೆ ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿರುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸಂಘಟನೆಯ ರಾಜ್ಯ ಅಧ್ಯಕ್ಷರು ಜಿಲ್ಲಾ ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷಕರುಗಳ ಮತ್ತು ಎಲ್ಲಾ ಹಂತದ ಪದಾಧಿಕಾರಿಗಳ ಮೇಲೆ ಅವ್ಯಸ್ಥಿತ ವ್ಯವಸ್ಥಾಪನೆ ಮಾಡಿ ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಹಾನಿ ಉಂಟು ಮಾಡಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಸುಳ್ಳು ದೂರು ನೀಡುವ ಮೂಲಕ ಸಂಘದ ತೇಜೋವಧೆ ಮಾಡುವ ಉದ್ದೇಶದಿಂದ ಕೂಡಿದ ಆಧಾರ ರಹಿತ ಆರೋಪ ಮಾಡಿರುತ್ತಾರೆ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಮಂಜುನಾಥ್, ರಾಜ್ಯ ಪರಿಷತ್ ಸದಸ್ಯ ಬಾಗೇಶ್ ಉಗ್ರಾಣ, ಕಾರ್ಯಾಧ್ಯಕ್ಷರಾದ ಸಿದ್ದೇಶ್ವರ್, ಎಸ್.ವೀರಣ್ಣ, ಉಪಾಧ್ಯಕ್ಷರಾದ ಶ್ರೀನಿವಾಸ್, ಬಿ.ಆರ್.ತಿಪ್ಪೇಸ್ವಾಮಿ, ಚಂದ್ರನಾಯ್ಕ್, ನಿರ್ದೇಶಕರಾದ ಗಂಗಣ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.