ಬೆಂಗಳೂರು, ಅಕ್ಟೋಬರ್. 15 : ರಾಜ್ಯದಲ್ಲಿ ಮತ್ತೆ ಎಲೆಕ್ಷನ್ ಬಂದಿದೆ. ಅದು ಮೂರು ಕ್ಷೇತ್ರಗಳಿಗೆ ಮಾತ್ರ. ಶಾಸಕರು ಸಂಸದರಾದ ಮೇಲೆ ತೆರವಾಗಿದ್ದ ಮೂರು ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಇಂದು ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಈಗ ರಾಜಕೀಯ ಘಟಾನುಘಟಿಗಳ ಪ್ರತಿಷ್ಠೆ, ಸ್ಪರ್ಧೆ ಮತ್ತೆ ಮುನ್ನೆಲೆಗೆ ಬರಲಿದೆ.
ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಇ.ತುಕರಾಂ ಅವರಿಂದ ತೆರವಾಗಿದ್ದ ಚನ್ನಪಟ್ಟಣ, ಶಿಂಗ್ಗಾವಿ, ಸಂಡೂರಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 13ರಂದು ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಅಂದೇ ನಡೆಯಲಿದ್ದು, ಇದೇ ತಿಂಗಳು ಅಂದ್ರೆ ಅಕ್ಟೋಬರ್ 25ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಅಕ್ಟೋಬರ್ 30 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶವೂ ಹೊರಬೀಳಲಿದೆ.
ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕ್ಷೇತ್ರ ಅಂದ್ರೆ ಅದು ಚನ್ನಪಟ್ಟಣ. ಈ ಕ್ಷೇತ್ರಕ್ಕೆ ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅದರಲ್ಲೂ ಬಿಜೆಪಿ ಜೆಡಿಎಸ್ ಸಮ್ಮಿಶ್ರದಲ್ಲಿ ಸಿಪಿ ಯೋಗೀಶ್ವರ್ ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಅತ್ತ ಕುಮಾರಸ್ವಾಮಿ ಯಾವುದನ್ನು ಬಾಯ್ಬಿಟ್ಟು ಹೇಳ್ತಿಲ್ಲ. ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ನಿರ್ಧಾರವೇ ಫೈನಲ್ ಆಗಲಿದೆ. ಹೀಗಾಗಿ ಸಿಪಿ ಯೋಗೀಶ್ವರ್ ಕಾಯ್ತಾ ಇದಾರೆ. ಇನ್ನು ಡಿಕೆ ಬ್ರದರ್ಸ್ ಗೆ ಇದು ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಇನ್ಮುಂದೆ ಏನೆಲ್ಲಾ ಅಪ್ಡೇಟ್ ಆಗಲಿದೆ ಎಂಬ ಕುತೂಹಲವಿದೆ.