ಚಿತ್ರದುರ್ಗ, (ಡಿ.13) : ಪ್ರಕೃತಿ ನೀಡಿರುವ ಶುದ್ದವಾದ ಗಾಳಿಗೆ ಯಾವುದೇ ಜಾತಿಯಿಲ್ಲ. ಎಲ್ಲಾ ಧರ್ಮವರಿಗೆ ಅತ್ಯವಶ್ಯಕವಾಗಿ ಬೇಕು. ಹಾಗಾಗಿ ಉಸಿರಾಟವೇ ಮನುಷ್ಯನ ನಿಜವಾದ ಆಸ್ತಿ ಎಂದು ಗೌತಮ ಬುದ್ದ ಪ್ರತಿಷ್ಠಾನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ರಮಾಬಾಯಿ ಅಂಬೇಡ್ಕರ್ ಬಡಾವಣೆ ಯಂಗಮ್ಮನಕಟ್ಟೆಯ ಸಮೀಪವಿರುವ ಗೌತಮ ಬುದ್ದ ಪ್ರತಿಷ್ಟಾನದ ಬೌದ್ದ ವಿಹಾರದ ವಿಪಶ್ಯನ ಧ್ಯಾನ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಸಿರಾಟವೇ ನಿತ್ಯ, ಉಸಿರಾಟವೇ ಸತ್ಯ, ಉಸಿರಾಟವೇ ಅಂತ್ಯ ಎನ್ನುವುದನ್ನು ಮಾನವ ಅರಿತಾಗ ಅಹಂ ನಾಶವಾಗಿ ಮಾನವ ಸಂಬಂಧ ಬೆಳೆಸಿಕೊಂಡು ಪ್ರಕೃತಿ ಪ್ರೇಮಿಯಾಗುತ್ತಾನೆಂದು ವಿಪಶ್ಯನ ಧ್ಯಾನದ ಮೂಲಕ ಭಗವಾನ್ ಬುದ್ದರು ತೋರಿಸಿದ್ದಾರೆ. ಭೌದ್ದ ಧರ್ಮದ ಮೈಲಿಗಲ್ಲುಗಳಾದ ಪ್ರಜ್ಞೆ ಹಾಗೂ ಕರುಣೆಯನ್ನು ಮೆಚ್ಚಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ದ ಧರ್ಮ ಸ್ವೀಕರಿಸಿದರು. ಈ ನಿಟ್ಟಿನಲ್ಲಿ ವಿಪಶ್ಯನ ಧ್ಯಾನ ಕೇಂದ್ರದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10-30 ರಿಂದ11-30 ರವರೆಗೆ ಕಾರ್ಯಕ್ರಮಗಳು ನಡೆಯುತ್ತವೆ. ಭೌದ್ದಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿ.ಪಿ.ತಿಪ್ಪೇಸ್ವಾಮಿ ಮನವಿ ಮಾಡಿದರು.
ಹಿರಿಯ ಸಾಹಿತಿ ಪ್ರೊ.ಲಿಂಗಪ್ಪ ಮಾತನಾಡಿ ಬುದ್ದನ ಸಂದೇಶ, ವಿಚಾರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ರವರ ಚಿಂತನೆಗಳನ್ನು ಅಳವಡಿಸಿಕೊಂಡು ಮೊದಲು ನಾವುಗಳು ಅಹಂಕಾರ, ಕಲ್ಮಶವನ್ನು ಮನಸ್ಸಿನಿಂದ ಹೊರ ಹಾಕಬೇಕು. ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಬುದ್ದ, ಅಂಬೇಡ್ಕರ್ ಅವರು ದಾರಿದೀಪ ಎಂದು ಹೇಳಿದರು.
ಮಲ್ಲಾಡಿಹಳ್ಳಿಯ ಪಿ.ಯು.ಕಾಲೇಜು ಪ್ರಾಚಾರ್ಯರಾದ ಸಿದ್ದಲಿಂಗಮ್ಮ ಮಾತನಾಡಿ ನೆಮ್ಮದಿಯುತ ಬದುಕಿಗೆ ಬುದ್ದನ ಮಾರ್ಗವೇ ದಾರಿ ಎಂದರು.
ನಗರಸಭೆ ಸದಸ್ಯೆ ಮಂಜುಳ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ಭೌದ್ದ ದೀಕ್ಷೆ ಪಡೆದಾಗಿನಿಂದ ನಾವುಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆಂದು ಹೇಳಿದರು.
ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮನಾಥ್ ಭೌದ್ದ ವಿಹಾರ ಧ್ಯಾನ ಕೇಂದ್ರದ ಅಭಿವೃದ್ದಿಗೆ ಒಂದು ಲಕ್ಷ ರೂ.ನೀಡುವುದಾಗಿ ಘೋಷಿಸಿ ಐವತ್ತು ಸಾವಿರ ರೂ.ಗಳನ್ನು ನೀಡಿದರು.
ಮೊರಾರ್ಜಿದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಮೂದೂರು ತೇಜ, ಬಾಳೆಕಾಯಿ ಶ್ರೀನಿವಾಸ್ ಇವರುಗಳು ತಲಾ ಐವತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಉಪನ್ಯಾಸಕ ಆರ್.ರಾಮಣ್ಣ, ಚಂದ್ರಪ್ಪ, ಪೆನ್ನಪ್ಪ, ಶಿಕ್ಷಕರಾದ ಹನುಮಂತಪ್ಪ, ಜಗದೀಶ್, ರಾಮಚಂದ್ರಪ್ಪ, ರಾಮಶೇಖರ್, ಇಂಜಿನಿಯರ್ ಎನ್.ಪಾತಪ್ಪ, ಸಾಹಿತಿ ಶಶಿಧರ್, ಕೃಷ್ಣಪ್ಪ, ಉಪನ್ಯಾಸಕ ಪಿ.ಆರ್.ಮಲ್ಲೇಶ್, ತಿಪ್ಪೇಸ್ವಾಮಿ, ಕೆರೆಯಾಗಳಹಳ್ಳಿ ಶಿವಕುಮಾರ್, ನ್ಯಾಯವಾದಿ ಕುಮಾರ್, ಸಿದ್ದಲಿಂಗಮ್ಮ, ಮೀನಾಕ್ಷಮ್ಮ, ಓಂಕಾರಮ್ಮ, ಶಕುಂತಲಮ್ಮ ಈ ಸಂದರ್ಭದಲ್ಲಿ ಹಾಜರಿದ್ದರು.