ತುಮಕೂರು: ವಿ ಸೋಮಣ್ಣ ಸದ್ಯ ತುಮಕೂರು ಜನರ ಆಶೀರ್ವಾದದಿಂದ ಗೆದ್ದು ಸಂಸದರಾಗಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸಚಿವರು ಆಗಿದ್ದಾರೆ. ತುಮಕೂರಿನಲ್ಲಿ ಕಚೇರಿ ಉದ್ಘಾಟನೆ ಮಾಡುವುದಕ್ಕೆಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೀಗ ಆ ವಿಚಾರಕ್ಕೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ತುಮಕೂರು ರೈಲ್ವೆ ಸ್ಟೇಷನ್ ಬಳಿ ಇರುವ ಐಬಿಯನ್ನು ಸೋಮಣ್ಣ ಅವರಿಗೆ ಕಚೇರಿ ಉಪಯೋಗಕ್ಕೆ ಕೊಡಲಾಗಿತ್ತು. ಹೀಗಾಗಿ ಸೋಮಣ್ಣ ಅವರು ಕೂಡ ಕಚೇರಿಯನ್ನು ಇನ್ನೊವೇಟ್ ಮಾಡುವುದಕ್ಕಾಗಿ ತಯಾರಿ ನಡೆಸಿದ್ದರು. ಹೊಸ ಫರ್ನಿಚರ್ ತರಿಸಿಟ್ಟಿದ್ದರು. ಹೊಸ ಕಚೇರಿಯ ಉದ್ಘಾಟನೆಯನ್ನು ದಿನಾಂಕ 18 ರಂದು ನಿಗಧಿ ಮಾಡಿದ್ದರು. ಅಂದರೆ ಇನ್ನೆರಡು ದಿನದಲ್ಲಿ ಕಚೇರಿ ಉದ್ಘಾಟನೆಯಾಗಬೇಕಿತ್ತು. ಈಗ ರಾಜ್ಯ ಸರ್ಕಾರ ಆ ಕಚೇರಿಯನ್ನು ವಾಪಾಸ್ ಪಡೆದು ಶಾಕ್ ನೀಡಿದೆ.
ಐಬಿಯಲ್ಲಿ ನಾಲ್ಕು ಕೊಠಡಿಗಳಿಗೆ ಸರ್ಕಾರವೇ ಅನುಮತಿ ನೀಡಿತ್ತು. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕವೇ ಸೋಮಣ್ಣ ಅವರು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದರು. ಇದೀಗ ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆಯನ್ನು ಈ ಕೂಡಲೇ ವಾಪಾಸ್ ಪಡೆಯಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.
ವಿ ಸೋಮಣ್ಣ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ತುಮಕೂರು ಜನತೆ ಅವರನ್ನು ಗೆಲ್ಲಿಸಿದ್ದರು. ಹೀಗಾಗಿ ತುಮಕೂರಿನಲ್ಲಿಯೇ ವಾಸವಿರುವ ವಿ ಸೋಮಣ್ಣ, ತುಮಕೂರಿನಲ್ಲಿಯೇ ಕಚೇರಿ ಮಾಡುವುದಕ್ಕೂ ತಯಾರಿ ನಡೆಸಿದ್ದರು. ಈಗ ರಾಜ್ಯ ಸರ್ಕಾರ ಹೀಗೆ ಶಾಕ್ ನೀಡಿದೆ.