ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಾಳೆ ಅಂದ್ರೆ ಭಾನುವಾರ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 50 ಸಹಾಯಕ ಎಂಜಿನಿಯರಿಂಗ್ ಹುದ್ದೆಗಳಿಗೆ ಕೆಇಎ ಭಾನುವಾರ ಪರೀಕ್ಷೆ ನಡೆಸಲಿದೆ. ಹುದ್ದೆಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳು ನಾಳೆಯ ಪರೀಕ್ಷೆಗೆ ಸಿದ್ಧತೆಯನ್ನು ಈಗಾಗಲೇ ನಡೆಸಿದ್ದು, ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ.
ಇನ್ನು ಈ ಪರೀಕ್ಷೆಯನ್ನು ಒಟ್ಟು 28 ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಬೆಂಗಳೂರು ಉತ್ತರ, ಬಳ್ಳಾರಿ, ಧಾರವಾಡ, ದಾವಣಗೆರೆ, ಕಲ್ಬುರ್ಗಿ ಮತ್ತು ಮೈಸೂರು ನಗರಗಳ ಒಟ್ಟು 28 ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಈ ಆರು ಜಿಲ್ಲೆಗಳಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಪರೀಕ್ಷೆ ನಡೆಯುವ ರೀತಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಎಲ್ಲಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಸಹಾಯಕ ಇಂಜಿನಿಯರಿಂಗ್ ಹುದ್ದೆಗಳು ಅರ್ಜಿ ಕರೆದಿರುವುದು ಕೇವಲ 50. ಆದರೆ ಈ ಹುದ್ದೆಗಳಿಗೆ ಅರ್ಜಿ ಹಾಕಿರುವುದು 14,131 ಅಭ್ಯರ್ಥಿಗಳು. ಎಲ್ಲರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಎಲ್ಲರಿಗೂ ಪರೀಕ್ಷೆಗೆ ಅವಕಾಶ ಮಾಡಲಾಗಿದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದು ಅಲ್ಲಲ್ಲಿ ಸುದ್ದಿಯಾಗುತ್ತಿರುತ್ತದೆ. ಎಷ್ಟೋ ಪರೀಕ್ಷೆಗಳಲ್ಲಿ ಸುಲಭವಾಗಿ ಅಕ್ರಮ ನಡೆಯುವುದಕ್ಕೆ ಬಿಟ್ಟು, ಪರೀಕ್ಷೆಗಳನ್ನು ಮುಂದೂಡಿಯೋ, ಮರು ಪರೀಕ್ಷೆ ಮಾಡುವ ಮೂಲಕವೋ ಮಕ್ಕಳ ಭವಿಷ್ಯದ ಜೊತೆಗೆ ಆಟವಾಡಿದಂತೆ ಆಗುತ್ತದೆ. ಹೀಗಾಗಿ ಈ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ.