ಬೆಂಗಳೂರು: ಬಿಜೆಪಿಗೆ ಟಾರ್ಗೆಟ್ ಇರುವುದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಸೋಲಿಸ ಬೇಕೆಂಬುದು. ಹೀಗಾಗಿ ಈ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಹಾಕಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಕೋಲಾರ ಬಿಟ್ಟು ಮತ್ತೆ ವರುಣಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಪ್ರತಿ ಸ್ಪರ್ಧಿಯಾಗಿ, ಬಿವೈ ವಿಜಯೇಂದ್ರ ಅವರನ್ನು ನಿಲ್ಲುಸುವ ಯೋಜನೆ ಇದೆ ಎನ್ನಲಾಗಿತ್ತು. ಒಂದು ವೇಳೆ ಸಿದ್ದರಾಮಯ್ಯ ಅವರು ವರುಣಾದಲ್ಲಿ ನಿಂತರೆ, ವಿಜಯೇಂದ್ರ ಅವರಿಗೂ ವರುಣಾ ಟಿಕೆಟ್ ಕೊಡಲು ಬಿಜೆಪಿ ಬಯಸಿತ್ತು. ಆದರೆ ಈಗ ವಿ ಸೋಮಣ್ಣ ಅವರಿಗೆ ವರುಣಾ ಟಿಕೆಟ್ ನೀಡಲಾಗಿದೆ. ವರುಣಾ ಕ್ಷೇತ್ರದ ಜೊತೆಗೆ ಚಾಮರಾಜನಗರಕ್ಕೂ ಟಿಕೆಟ್ ನೀಡಲಾಗಿದೆ. ಆದರೆ ಪ್ರಾಬಲ್ಯತೆ ಹೊಂದಿದ್ದ ಗೋವಿಂದರಾಜನಗರ ಮಿಸ್ಸಾಗಿದೆ.
ಇನ್ನು ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ಸ್ಪರ್ಧಿಸಲಿದ್ದಾರೆ. ಕನಕಪುರದ ಬಂಡೆ ಎಂದೇ ಖ್ಯಾತಿ ಪಡೆದಿರುವ ಡಿಕೆಶಿ ಎದುರು ಆರ್ ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಜೊತೆಗೆ ತನ್ನ ಪ್ರಾಬಲ್ಯವಿರುವ ಪದ್ಮನಾಭನಗರದಲ್ಲೂ ಟಿಕೆಟ್ ಘೋಷಣೆ ಮಾಡಿದೆ. ಇದನ್ನೆಲ್ಲಾ ಗಮನಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರ ಸ್ಪರ್ಧೆ ಜೋರಾಗಿಯೇ ಇರಲಿದೆ.