ಸುದ್ದಿಒನ್, ಚಿತ್ರದುರ್ಗ. ನ.18 : ರಾಜ್ಯದ ಆರೋಗ್ಯ, ಶಿಕ್ಷಣ ಹಾಗೂ ಕಾನೂನು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಯುವ ಸಂಸತ್ ಕಲಾಪ (ಅಣಕು ಪ್ರದರ್ಶನ) ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಕ್ಕೆ ವೇದಿಕೆ ಕಲ್ಪಿಸಿದಂತೆ ಕಂಡುಬಂದಿತು.
ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವಾಲಯ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಶ್ರಾಯದಲ್ಲಿ 2023-24ನೇ ಸಾಲಿನ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಯಿಂದ ಆಯ್ಕೆಯಾದ 20 ಮಕ್ಕಳು ಭಾಗವಹಿಸಿದ್ದರು.
ಜಿ.ಪಂ ಸಭಾಂಗಣದಲ್ಲಿ ಜರುಗಿದ ಅಣಕು ಯುವ ಸಂಸತ್ ಕಲಾಪ ನಿಜಕ್ಕೂ ಕುತೂಹಲಕಾರಿಯಾಗಿತ್ತು. ವಿಧಾನಸೌಧದಲ್ಲಿ ಜರುಗುವ ಕಲಾಪದ ರೀತಿಯಲ್ಲಿಯೇ, ಯುವ ಸಂಸತ್ ಕಲಾಪ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವ ರೀತಿಯ ಪರಿಕಲ್ಪನೆ ನಿಜಕ್ಕೂ ಪ್ರಶಂಸನೀಯವಾಯಿತು.
ಹೊಸದುರ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯಶವಂತ್ ಪಾಟೀಲ್ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಯುವ ಸಂಸತ್ ಕಾರ್ಯ ಕಲಾಪಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಅಗಲಿದ ಗಣ್ಯರಿಗೆ ಸಂತಾಪ : ಡಾ.ಪುನೀತ್ ರಾಜ್‍ಕುಮಾರ್, ಡಾ.ಭುಜಂಗ ಶೆಟ್ಟಿ, ಡಿ.ಬಿ.ಚಂದ್ರೇಗೌಡರ ಅಕಾಲಿಕ ಮರಣದ ಕುರಿತು ಸಭಾಧ್ಯಕ್ಷರು ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಅಗಲಿದ ಗಣ್ಯರ ಗೌರವಾರ್ಥವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ: ಹಿರಿಯೂರು ತಾಲ್ಲೂಕಿನ ಕೆ.ಪಿ.ಎಸ್. ಶಾಲೆ ವಿದ್ಯಾರ್ಥಿನಿ ವಿರೋಧ ಪಕ್ಷದ ನಾಯಕಿ ನಂದಿತಾ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ. ಇದಕ್ಕೆ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಹೊಳಲ್ಕೆರೆ ತಾಲ್ಲೂಕಿನ ಎಂ.ಎಂ ಸರ್ಕಾರಿ ಫ್ರೌಢಶಾಲೆ ವಿದ್ಯಾರ್ಥಿನಿ ಶಿಕ್ಷಣ ಸಚಿವೆ ಜಿ.ಆರ್.ಶಾಲಿನಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಹಲವು ಕೊರತೆಗಳನ್ನು ನೀಗಿಸುತ್ತಿದ್ದೇವೆ. ಎಲ್ಲಾ ಮಕ್ಕಳಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ ಎಂದರು.
ಶಿಕ್ಷಣ ಮಂತ್ರಿಗಳ ಉತ್ತರದಿಂದ ಸಮಾಧಾನಗೊಳ್ಳದ ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು, ಉಡಾಫೆ ಉತ್ತರ ನೀಡಬಾರದು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.
ನಂತರ ಇದಕ್ಕೆ ಪ್ರತಿಕ್ರಿಯಿಸಿದ ಹೊಳಲ್ಕೆರೆ ಎಂ.ಎಂ. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮುಖ್ಯಮಂತ್ರಿ ಅಂಕಿತ, ಎಲ್ಲಾ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಂಪ್ಯೂಟರ್ ವ್ಯವಸ್ಥೆ, ಕ್ರೀಡಾ ಸಾಮಾಗ್ರಿಗಳು, ಪಠ್ಯಪುಸ್ತಕಗಳನ್ನು ನೀಡುತ್ತಿದ್ದೇವೆ ಎಂದು ಉತ್ತರಿಸಿದ ಅವರು, ನಮ್ಮ ಸರ್ಕಾರ ಗಂಭೀರವಾಗಿದೆ. ನಿಮ್ಮ ಸರ್ಕಾರದಲ್ಲಿ ನೀಡುತ್ತಿದ್ದ ಶಿಕ್ಷಣದ ಗುಣಮಟ್ಟವನ್ನು ನಮ್ಮ ಸರ್ಕಾರ ಹೆಚ್ಚು ಮಾಡಿದೆ. ಉಡಾಫೆಯ ಪ್ರಶ್ನೆಯಿಲ್ಲ. ನಿಮ್ಮ ಸರ್ಕಾರದ ಆಡಳಿತ ವೈಖರಿ ನಮಗೆ ಗೊತ್ತಿದೆ ಎಂದು ಖಾರವಾಗಿ ವಿರೋಧ ಪಕ್ಷದ ವಿರುದ್ದ ಹರಿಹಾಯ್ದರು.
ಮುಖ್ಯಮಂತ್ರಿಗಳ ಮಾತಿನಿಂದ ಕೆರಳಿದ ವಿರೋಧ ಪಕ್ಷದ ನಾಯಕಿ ಹಿರಿಯೂರು ತಾಲ್ಲೂಕಿನ ಕೆ.ಪಿ.ಎಸ್. ಶಾಲೆ ವಿದ್ಯಾರ್ಥಿನಿ ನಂದಿತಾ ಮುಖ್ಯಮಂತ್ರಿಗಳಿಗೆ ರಾಜ್ಯದ ಪ್ರತಿಯೊಂದು ಮಾಹಿತಿ ತಿಳಿದಿರಬೇಕು. ವಿರೋಧ ಪಕ್ಷದ ಸದಸ್ಯರು ಮಾಹಿತಿ ನೀಡಿದ ನಂತರ ಪರಿಶೀಲಿಸುತ್ತೇನೆ ಎನ್ನುವುದಲ್ಲ. ಮುಖ್ಯಮಂತ್ರಿಗಳಿಗೆ ಬೇರೆ ಏನು ಕೆಲಸವಿದೆ? ಹಿಂದಿನ ಆಳ್ವಿಕೆ ಬಗ್ಗೆ ಟೀಕಿಸುವ ಅಗತ್ಯವಿಲ್ಲ. ಹಿಂದಿನ ಸರ್ಕಾರದೊಂದಿಗೆ ಹೊಲಿಸಿ ಮಾತನಾಡಬೇಡಿ. ಪ್ರಸ್ತುತ ಯಾರ ಸರ್ಕಾರ ಆಡಳಿತದಲ್ಲಿದೆ ಎನ್ನುವುದು ಗಮನದಲ್ಲಿ ಇರಲಿ ಎಂದು ಮುಖ್ಯಮಂತ್ರಿಗಳನ್ನು ಕೆಣಕಿದರು.
ವಿರೋಧ ಪಕ್ಷದ ನಾಯಕರ ಮಾತಿಗೆ ಏರುಧ್ವನಿಯಲ್ಲಿ ಉತ್ತರಿಸಲು ಪ್ರಯತ್ನಿಸಿದ ಮುಖ್ಯಮಂತ್ರಿಯನ್ನು ಸಭಾಧ್ಯಕ್ಷ ಯಶವಂತ್ ಪಾಟೀಲ್ ನಿಯಂತ್ರಿಸಿ, ಸದಸ್ಯರು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ನೀಡಬೇಕು. ಅನಗತ್ಯವಾದ ವಿವಾದಗಳು ಬೇಡ ಎಂದು ತಾಕೀತು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಮಹಿಳೆಯರಿಂದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಗೃಹ ಲಕ್ಷ್ಮೀ ಯೋಜನೆಗಳ ಪಾವತಿಯನ್ನು ನೇರವಾಗಿ ಫಲಾನುಭವಿಗಳ ಖಾತೆ ಜಮೆ ಮಾಡಲಾಗುತ್ತಿದೆ. ತೊಂದರೆ ಕಂಡು ಬಂದರೆ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಯುವನಿಧಿ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಸದನಕ್ಕೆ ಉತ್ತರಿಸಿದರು.
ಯುವ ಸಂಸತ್ತು ಸ್ಪರ್ಧೆಯಲ್ಲಿ ಹೆಚ್.ಕೆ.ಅಕ್ಷತಾ, ವಿ.ನಂದಿತಾ, ಬಿ.ಎಂ.ಸಿದ್ರ್ದಾಥ್, ಎ.ಆರ್.ಅಮಿತ್, ಎಸ್.ನಂದನಾ, ಮನೋಹರ, ಕುಶಲ್ , ರೋಹಿತ್, ರೋಹಿತ್ ಕುಮಾರ್ ಸೇರಿದಂತೆ ಇತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ: ಇದೇ ನವೆಂಬರ್ 25ರಂದು ಹಾವೇರಿಯಲ್ಲಿ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ ನಡೆಯಲಿದ್ದು, ಜಿಲ್ಲೆಯಿಂದ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಾದ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಕೆಪಿಎಸ್ ಶಾಲೆಯ ಎಸ್.ವಿ.ನಂದಿತ, ಹೊಳಲ್ಕೆರೆ ಪಟ್ಟಣದ ಎಂ.ಎಂ.ಪ್ರೌಢಶಾಲೆಯ ಎಸ್.ಅಂಕಿತ, ಮೊಳಕಾಲ್ಮುರು ತಾಲ್ಲೂಕಿನ ಆದರ್ಶ ವಿದ್ಯಾಲಯದ ಟಿ.ಮನೋಹರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ, ಶಾಸನಗಳ ರಚನೆ ಬಗ್ಗೆ ಅರಿವು ಮೂಡಿಸುವ ದೃಷ್ಠಿಯಿಂದ ಶಾಲಾ ಹಂತದಲ್ಲಿಯೇ ಸಂಸದೀಯ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.
ದೇಶದ ಭವಿಷ್ಯ ರೂಪಿಸುವುದೇ ಶಾಲೆಯ ಮಕ್ಕಳು. ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯು ಹೆಚ್ಚಾಗಿ ಬೆಳೆಯಬೇಕು ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಆಂಗ್ಲ ಮತ್ತು ಸಮಾಜ ವಿಷಯದ ವಿಷಯ ಪರಿವೀಕ್ಷಕ ಚಂದ್ರಣ್ಣ, ಸಮಾಜ ವಿಜ್ಞಾನ ಸಂಘದ ಅಧ್ಯಕ್ಷ ಎ.ನೀಲಕಂಠಪ್ಪ, ಡಯಟ್ ಉಪನ್ಯಾಸಕ ಜ್ಞಾನೇಶ್, ತೀರ್ಪುಗಾರರಾದ ಬುಡೇನ್‍ಸಾಬ್, ಜೈಶ್ರೀನಿವಾಸ್, ಬಸವರಾಜ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.