ಬೆಂಗಳೂರು: ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಭೆ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ್ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಅಧ್ಯಕ್ಷರ ವಿಚಾರ ಚರ್ಚೆಯಾಗಿದೆ. ಆದರೆ ಇಬ್ಬರು ಒಮ್ಮತಕ್ಕೆ ಬಂದಿಲ್ಲ ಎಂದೇ ಹೇಳಲಾಗಿದೆ. ಹೀಗಾಗಿ ಅಧ್ಯಕ್ಷರ ಪಟ್ಟಿ ಫೈನಲ್ ಆಗಿಲ್ಲ.
ಸಿಎಂ ಹಾಗೂ ಡಿಸಿಎಂ ಇಬ್ಬರು ಕೂಡ ತಮ್ಮ ಆಪ್ತರಿಗೆ ಕೊಡಿಸುವ ಹಠ ಬಿಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ ಸುರ್ಜೇವಾಲ್ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ. ನವೆಂಬರ್ 28ರಂದು ಸುರ್ಜೇವಾಲ್ ಮತ್ತೆ ಸಭೆ ನಡೆಸಲಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಹಲವು ನಾಯಕರ ಶಾರ್ಟ್ ಲೀಸ್ಟ್ ರೆಡಿಯಾಗಿದ್ದು, ಆ ಪಟ್ಟಿ ಸಮೇತ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಜೊತೆಗೆ ಚರ್ಚಿಸಿ, ಬಳಿಕ ರಾಜ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ನಡೆಸಲಿದ್ದಾರೆ.
ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾವು ಲೋಕಸಭಾ ಚುನಾವಣೆಗೆ ಹೋಗಬೇಕು. ಹೀಗಾಗಿ ಸೂಕ್ತ ನಾಯಕರಿಗೆ ನಿಗಮ ಮಂಡಳಿ ಸ್ಥಾನ ಸಿಗಬೇಕಿದೆ. ನಮ್ಮ ನಾಯಕರ ನಡುವೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ನೇಮಕವಾಗಲಿದೆ ಎಂದಿದ್ದಾರೆ.