ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಬಾಳಿ ಬದುಕಬೇಕಿದ್ದ, ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ನೇಹಾಳನ್ನು ಕ್ರೂರವಾಗಿ ಕೊಂದಿದ್ದಾನೆ ಫಯಾಜ್. ಆದರೆ ಇನ್ನು ಆ ನೋವು ಯಾರಲ್ಲಿಯೂ ಕಡಿಮೆಯಾಗಿಲ್ಲ, ಆ ಘಟನೆ ಇನ್ನು ಕಣ್ಣಿಗೆ ಕಟ್ಟಿದಂತೆಯೆ ಇದೆ. ಹೀಗಿರುವಾಗ ಮತ್ತೆ ಅಂತದ್ದೇ ಘಟನೆ ಹುಬ್ಬಳ್ಳಿಯಲ್ಲಿಯೇ ನಡೆದಿರುವುದು ಆತಂಕ ಸೃಷ್ಟಿಸಿದೆ.
ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿದ್ದ ಅಂಜಲಿಯನ್ನು ಕೊಲ್ಲಲಾಗಿದೆ. ಅಂಜಲಿ ಅವರ ಅಜ್ಜಿ ಮನೆಯಲ್ಲಿ ಮಲಗಿದ್ದಾಗ ಆರೋಪಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಆತ ಓಡಿ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆಗಳು ನಡೆದಿದೆ. ಅಂಜಲಿ ಶವವನ್ನು ಕಿಮ್ಸ್ ನಲ್ಲಿ ಇಡಲಾಗಿದೆ.
ಇನ್ನು ಮೃತರ ಮನೆಗೆ ಮೃತ ನೇಹಾರ ತಂದೆ ನಿರಂಜನ ಹಿರೇಮಠ ಭೇಟಿ ಕೊಟ್ಟಿದ್ದು ಸಾಂತ್ವನ ಹೇಳಿದ್ದಾರೆ. ಅದೇ ಓಣಿಯ ಕಾರ್ಪೋರೇಟರ್ ಕೂಡ ಆಗಿದ್ದಾರೆ. ಅದೇ ಏರಿಯಾದಲ್ಲಿ ಯುವತಿಯ ಕೊಲೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
‘ನನ್ನ ವಾರ್ಡ್ ನಲ್ಲಿ ಇಂತಹ ಘಟನೆಯಾಗುವುದನ್ನು ಖಂಡಿಸುತ್ತೇನೆ. ನನ್ನ ಮಗಳು ನೇಹಾ ಹತ್ಯೆಯಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ. ನನ್ನ ವಾರ್ಡ್ ನಲ್ಲೇ ಮತ್ತೆ ಅಂತದ್ದೇ ಘಟನೆಯಾಗಿದೆ. ನನ್ನ ಮಗಳು ಹತ್ಯೆಯಾದಾಗಲೇ ಮತ್ತೆ ಇಂತ ಘಟನೆ ನಡೆಯಬಾರದು ಎಂದು ಹೇಳಿದ್ದೆ. ನೇಹಾಳ ಹತ್ಯೆ ವಚಾರದಲ್ಲಿ ಯಾವ ರೀತಿ ಪ್ರತಿಭಟನೆ ನಡೆದಿತ್ತೋ, ಅದೇ ರೀತಿ ಇವಳ ಹತ್ಯೆಯನ್ನು ಖಂಡಿಸಬೇಕು. ಹುಬ್ಬಳ್ಳಿಯಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಗಾಂಜಾ-ಅಫೀಮು ಅಂತ ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.