ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವುದು ಪಕ್ಕಾ ಆಗಿದೆ. ಅದಕ್ಕಾಗಿ ಈಗಾಗಲೇ ಗಂಗಾವತಿಯಲ್ಲೂ ಮನೆ ಮಾಡಲಾಗಿದೆ. ಹೊಸ ಪಕ್ಷದ ಹೆಸರನ್ನು ರಿಜಿಸ್ಟರ್ ಮಾಡಿದ್ದಾರೆ ಎಂಬ ಗಾಸಿಪ್ ಸುದ್ದಿಯೂ ಇದೆ. ಇದೆಲ್ಲದರ ನಡುವೆ ಜನಾರ್ದನ ರೆಡ್ಡಿ ಟೆಂಪಲ್ ರನ್ ಕೂಡ ನಡೆಸುತ್ತಿದ್ದಾರೆ.
ಸೋಮವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ರೆಡ್ಡಿ ಬಳಿಕ ಹುಬ್ಬಳ್ಳಿಯ ಸಿದ್ದರೂಢ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಮತ್ತೆ ಗದಗದ ತೋಂಟದಾರ್ಯ ಶ್ರೀಗಳ ಗದ್ದುಗೆ, ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಟೆಂಪಲ್ ರನ್ ಮುಗಿದ ಮೇಲೆ ಇಂದು ರಾಯಚೂರಿನ ಮಸ್ಕಿಯಲ್ಲಿ ರಾಜಕೀಯ ಪ್ರಮುಖ ಮುಖಂಡರ ಜೊತೆಗೆ ಹೈವೋಲ್ಟೇಜ್ ಸಭೆ ನಡೆಸಲಿದ್ದಾರೆ.
ಮಸ್ಕಿ ಪಟ್ಟಣದ ರೆಸಾರ್ಟ್ವೊಂದರಲ್ಲಿ ಸಭೆ ನಿಗಧಿಯಾಗಿದ್ದು, ಕೊಪ್ಪಳ, ವಿಜಯನಗರ, ರಾಯಚೂರಿನ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. 500 ಮಂದಿ ರಾಜಕೀಯ ನಾಯಕರು ಈ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಜೊತೆಗೆ ಈ ಸಭೆ ನಡೆಸಲಿದ್ದಾರೆ. ಹೊಸ ಪಕ್ಷದ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 25ಕ್ಕೆ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಜೊತೆಗೆ ಮಸ್ಕಿ ಅಥವಾ ಸಿಂಧನೂರಿನಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.