ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, (ಆ.18) : ಪ್ರಕೃತಿ ಸುಂದರವಾಗಿರಬೇಕಾದರೆ ಯಜ್ಞಾ ಯಾಗಾಧಿಗಳು ನಡೆಯುತ್ತಿರಬೇಕು. ಯಜ್ಞ, ಹೋಮದಿಂದ ಮಳೆ ಬರುತ್ತದೆಂಬ ನಂಬಿಕೆಯಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಹೇಳಿದರು.
ಗೋನೂರಿನ ಮುತ್ತಯ್ಯನಹಟ್ಟಿ ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಶುಕ್ರವಾರ ನಡೆದ ಪೂಜಾ ಮತ್ತು ದೇವಸ್ಥಾನದ ಚಂದ್ರಶಾಲಾ ಕಟ್ಟಡ ಪ್ರಾರಂಭೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಅನ್ನದಾಸೋಹ ಅತ್ಯಂತ ಪವಿತ್ರವಾದುದು, ಗೋಸೇವೆ ಕೂಡ ಅಷ್ಟೇ ಪುಣ್ಯದ ಕೆಲಸ. ಗೋಶಾಲೆಗಳನ್ನು ತೆರೆಯುವುದು ಸುಲಭ. ಆದರೆ ಪಾಲನೆ ಮಾಡುವುದು ಕಷ್ಟ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ನೀಡಿರುವುದರಿಂದ ಸೇವಕರ ಕೊರತೆ ಜಾಸ್ತಿಯಾಗಿದೆ. ಭಕ್ತರ ಜೊತೆ ಸರ್ಕಾರದ ನೆರವು ಸಿಕ್ಕಾಗ ರಾಜರಾಜೇಶ್ವರಿ ದೇವಸ್ಥಾನ ಇನ್ನು ಅಭಿವೃದ್ದಿಯಾಗಲು ಸಹಕಾರಿಯಾಗಲಿದೆ. ಮುಂದಿನ ವರ್ಷ ಚಂದ್ರಶಾಲಾ ಉದ್ಘಾಟನೆಗೊಳ್ಳಲಿ ಎಂದು ಹಾರೈಸಿದರು.
ಧರ್ಮಗ್ರಂಥಗಳು ಜನಮಾಸಕ್ಕೆ ಮುಟ್ಟಬೇಕು. ದೇವಸ್ಥಾನದಲ್ಲಿ ನಾಗರಾಜ್‍ಭಟ್‍ರು ಗೋಶಾಲೆಯನ್ನು ತೆರೆದು ಗೋವುಗಳ ಸೇವೆ ಮಾಡುತ್ತಿರುವುದು ಸುಲಭದ ಕೆಲಸವಲ್ಲ. ಮೊಬೈಲ್ ಹಾವಳಿಯಿಂದ ಓದುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ವಿಷಾಧಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಕೆಲವರು ದೇವರನ್ನು ನಂಬುವುದಿಲ್ಲ. ಧಾರ್ಮಿಕ ವ್ಯವಸ್ಥೆಯಲ್ಲಿ ನಂಬಿಕೆಯಿಡುವುದರಿಂದ ಒಳ್ಳೆಯದಾಗುತ್ತದೆ. ದೈವ ಬಲದಿಂದ ಸಂಸ್ಕøತಿ, ಸಂಸ್ಕಾರ ಮೂಡುತ್ತದೆ. ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಹಕಾರದ ಜೊತೆಗೆ ಸರ್ಕಾರದಿಂದ ಅನುದಾನ ಪಡೆದು ಅಭಿವೃದ್ದಿಪಡಿಸಿಕೊಳ್ಳಲು ಅವಕಾಶವಿದೆ. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಜೊತೆ ನನ್ನ ಬೆಂಬಲವೂ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾಗರಾಜ್‍ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ಪ್ರಭುದೇವ್ ವೇದಿಕೆಯಲ್ಲಿದ್ದರು. ಪುಣ್ಯಾಹ, ಗಣಪತಿ ಪೂಜೆ, ಋತ್ವಿಗ್ವರಣನೆ, ಕಲಶಸ್ಥಾಪನೆ, ದುರ್ಗಾ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿತರಿಸಲಾಯಿತು. ಕೋಟಿ ರುದ್ರ ಪಾರಾಯಣ ವೃಂದ ಇವರಿಂದ ರುದ್ರ ಪಾರಾಯಣ, ವಿವಿಧ ಭಜನಾ ಮಂಡಳಿಯಿಂದ ಲಲಿತ ಸಹಸ್ರನಾಮ ನೆರವೇರಿತು.
ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ಪೂಜಾ ಮತ್ತು ಚಂದ್ರಶಾಲಾ ಕಟ್ಟಡ ಪ್ರಾರಂಭೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.