ಚಿತ್ರದುರ್ಗ: ಕಂದಾಯ, ಸರ್ವೆ, ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ರೈತರಿಗಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಅಖಂಡ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದಂತಾಗಿದ್ದು, ಕೂಡಲೆ ದಾರಿ ಮಾಡಿಕೊಡಬೇಕು.
ಪಹಣಿಗಳಿಂದಾಗುತ್ತಿರುವ ಲೋಪಗಳಿಂದ ರೈತರು ಸರ್ಕಾರದಿಂದ ಸಿಗಬೇಕಾದ ಸೌಲತ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಇ.ಸ್ವತ್ತುಗಳನ್ನು ಮಾಡಿಕೊಡಲು ಅನಗತ್ಯವಾಗಿ ವಿಳಂಭವಾಗುತ್ತಿದೆ.
ತ್ವರಿತವಾಗಿ ಇ.ಸ್ವತ್ತುಗಳನ್ನು ನೀಡಲು ಸಂಬಂಧಪಟ್ಟವರಿಗೆ ಸೂಚಿಸಬೇಕು.
ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ರೈತರ ಪಂಪ್‍ಸೆಟ್‍ಗಳಿಗೆ ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು.
ತಾಲ್ಲೂಕು ಕಚೇರಿಗಳಲ್ಲಿ ಪಹಣಿಗಾಗಿ 30 ರೂ.ಗಳನ್ನು ವಸೂಲು ಮಾಡುತ್ತಿರುವುದನ್ನು ಐದು ರೂ.ಗಳಿಗೆ ಇಳಿಸಬೇಕು.
ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಲಾಗುತ್ತಿರುವ ತುಂತುರು ನೀರಾವರಿ ಸೆಟ್‍ಗಳನ್ನು ಏಳು ವರ್ಷಗಳ ಬದಲಿಗೆ ಮೂರು ವರ್ಷಕ್ಕೆ ಮಾರ್ಪಡಿಸಬೇಕೆಂದು ರೈತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಜಿಲ್ಲಾಧ್ಯಕ್ಷ ಎಚ್.ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜಿ.ಎಸ್.ಶಿವಣ್ಣ ಕುರುಬರಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಪರಮೇಶ್ವರಪ್ಪ, ಕೋಶಾಧ್ಯಕ್ಷ ಗೌಡ್ರು ಪರಮಶಿವಣ್ಣ, ಖಾದರ್‍ಭಾಷ, ಹೆಚ್.ಪ್ರಕಾಶ್, ಅಣ್ಣಪ್ಪಸ್ವಾಮಿ, ಹನುಮಂತರಾಯ, ನವೀನ್‍ಕುಮಾರ್, ಜಂಪಣ್ಣ ಇನ್ನು ಅನೇಕ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.